ಮಂಡ್ಯ: ರೈತರ ಉಳಿವಿಗೆ ಒತ್ತಾಯಿಸಿ ರೈತಸಂಘ ಪ್ರತಿಭಟನೆ
ರೈತರ ದುಸ್ಥಿತಿ ಕುರಿತ ಅಣಕು ಪ್ರದರ್ಶನ

ಮಂಡ್ಯ, ಅ.5: ಜಿಲ್ಲೆಯ ರೈತರ ಉಳಿವಿಗಾಗಿ ಹಾಗೂ ಸ್ವಾಭಿಮಾನದ ರಕ್ಷಣೆಗಾಗಿ ಒತ್ತಾಯಿಸಿ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದ ರೈತರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಲಬಾಧೆಗೊಳಗಾದ ರೈತರು ಆತ್ಮಹತ್ಯೆಗೆ ಕೊರಳೊಡ್ಡುತ್ತಿರುವ ಹಾಗೂ ಕುಟುಂಬ ದಿಕ್ಕು ಕಾಣದೆ ರೋದಿಸುತ್ತಿರುವ ಅಣಕು ಪ್ರದರ್ಶನದ ಮೂಲಕ ರೈತರ ಸಂಕಷ್ಟದ ಬಗ್ಗೆ ಸರಕಾರದ ಗಮನ ಸೆಳೆಯಲಾಯಿತು.
ಜಿಲ್ಲೆಯ ರೈತರು ಹಲವು ಸಮಸ್ಯೆಗಳ ಸುಳಿಗೆ ಸಿಲುಕಿದ್ದು, ಬದುಕು ಸಾಗಿಸಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಿದೆ. ಮಳೆ ಇಲ್ಲದೆ, ಸಮರ್ಪಕ ವಿದ್ಯುತ್ ಇಲ್ಲದೆ ಪರಿತಪಿಸುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮೈಷುಗರ್ ನಲ್ಲಿ ಸಮರ್ಪಕ ಕಬ್ಬು ಅರೆಯುತ್ತಿಲ್ಲ. ಪಿಎಸ್‍ಎಸ್‍ಕೆ ಪ್ರಾರಂಭವಾಗಿಲ್ಲ. ತರಕಾರಿ ಬೆಳೆಗಳು, ರೇಷ್ಮೆಗೆ ಯೋಗ್ಯ ಬೆಲೆ ಇಲ್ಲ. ಹಾಲಿಗೆ ಉತ್ತಮ ದರ ನಿಗದಿಯಾಗಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಂಡರು.
ರೈತರ, ಕೃಷಿ ಕಾರ್ಮಿಕರ ಓಟು ಪಡೆಯಲು ಚುನಾವಣೆ ವೇಳೆ ನೀಡಿದ ಸಾಲಮನ್ನಾ ಮತ್ತಿತರ ಭರವಸೆಗಳು ಈಡೇರಿಲ್ಲ. ಸಹಕಾರ ಸಂಘ, ಬ್ಯಾಂಕ್‍ಗಳಿಂದ ನೊಟೀಸ್ ಬರುತ್ತಿದೆ. ಖಾಸಗಿಯವರ ದುಬಾರಿ ಬಡ್ಡಿಗೆ ಕೈಚಾಚಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.
ರೈತರು, ಕೃಷಿ ಕಾರ್ಮಿಕರು, ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಬೇಕು. ಅಡವಿಟ್ಟ ಆಭರಣಗಳ ಹರಾಜು ಮಾಡಬಾರದು. ಬೆಳೆ ಬೆಳೆಯಲು ಷರತ್ತಿಲ್ಲದ ಹೊಸದಾಗಿ ಸಾಲ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.ಜಿಲ್ಲೆಯ ಕೆರೆಕಟ್ಟೆಗಳ ಅಕ್ರಮ ಒತ್ತುವರಿ ತೆರವುಗೊಳಿಸಿ ಪುನಶ್ಚೇತನಗೊಳಿಸಿ ನೀರು ತುಂಬಿಸಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ವೇಳೆ ಮಾತ್ರ ಕನಿಷ್ಠ 8 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಮೈಷುಗರ್, ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ನೀಡಿ ಪುನಶ್ಚೇತನಗೊಳಿಸಬೇಕು. ಡಾ.ಸ್ವಾಮಿನಾಥನ್ ವರದಿಯನ್ವಯ ಕಬ್ಬಿಗೆ ದರ ನಿಗದಿಯಾಗಬೇಕು. ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿರುವ ಬಾಕಿ ಪಾವತಿಗೆ ಕ್ರಮವಹಿಸಬೇಕು ಎಂದೂ ಅವರು ತಾಕೀತು ಮಾಡಿದರು.
ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರಿಗೆ ಪ್ರತಿಭಟನಾಕಾರರು ಸಮಸ್ಯೆಗಳನ್ನು ಈಡೇರಿಕೆಗೆ ಕ್ರಮವಹಿಸಲು ಆಗ್ರಹಿಸಿದರು. ಈ ಕುರಿತು ಸರಕಾರದ ಗಮನ ಸೆಳೆಯುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ರೈತಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಪ್ರಧಾನ ಕಾರ್ಯದಶಿ ಬಡಗಲಪುರ ನಾಗೇಂದ್ರ, ವಿಭಾಗೀಯ ಕಾರ್ಯದರ್ಶಿ ರಾಮಕೃಷ್ಣಯ್ಯ, ಮಹಿಳಾಧ್ಯಕ್ಷೆ ನಂದಿನಿ ಜಯರಾಂ, ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಖಜಾಂಚಿ ಲಿಂಗಪ್ಪಾಜಿ, ಎಂ.ವಿ.ರಾಜೇಗೌಡ, ಮರಿಚನ್ನೇಗೌಡ, ಕೆ.ಟಿ.ಗೋವಿಂದೇಗೌಡ, ಯಧುಶೈಲ ಸಂಪತ್, ಲತಾಶಂಕರ್, ಮಹೇಂದ್ರ ಇತರ ಮುಖಂಡರು ಭಾಗವಹಿಸಿದ್ದರು.







