ಯುವಕರು ಮಾದಕ ವ್ಯಸನಕ್ಕೆ ಬಲಿಯಾದರೆ ಸಮಾಜ ರಕ್ಷಣೆ ಕಷ್ಟ: ಡಾ.ಬಲ್ಲಾಳ್

ಮಂಗಳೂರು, ಅ. 6: ಯುವಕರು ಮಾದಕ ವ್ಯಸನಕ್ಕೆ ಬಲಿಯಾದರೆ ಭವಿಷ್ಯದ ಸಮಾಜದ ರಕ್ಷಣೆ ಕಷ್ಟ ಎಂದು ಮಣಿಪಾಲ ವಿಶ್ವವಿದ್ಯಾಲಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅಭಿಪ್ರಾಯಿಸಿದ್ದಾರೆ.
ಅವರು ಇಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಪುರಭವನದಲ್ಲಿ ಶನಿವಾರ ನಡೆದ ಗಾಂಧಿ ಸ್ಮೃತಿ ವಿಚಾರ ಸಂಕಿರಣ, ವ್ಯಸನ ಮುಕ್ತ ಸಾಧಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಯುವ ಜನಾಂಗ ಸಮಾಜದ ಆಸ್ತಿ. ಇವರು ದುಶ್ಚಟಕ್ಕೆ ಬಲಿಯಾಗದಂತೆ ಮಾರ್ಗದರ್ಶನ ಮಾಡುವುದು ಹಿರಿಯರ ಕರ್ತವ್ಯ ಎಂದವರು ಹೇಳಿದರು.
ಮುಖ್ಯ ಅತಿಥಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ರಾಮ ರಾಜ್ಯವಾಗಬೇಕಾದರೆ ಗ್ರಾಮ ಸ್ವರಾಜ್ಯವಾಗಬೇಕು ಎಂಬ ಗಾಂಧೀಜಿಯ ಕಲ್ಪನೆಯನ್ನು ಸಾಕಾರಗೊಳಿಸಲು ಡಾ. ವೀರೇಂದ್ರ ಹೆಗ್ಗಡೆಯವರು ಶ್ರಮಿಸುತ್ತಿದ್ದಾರೆ ಎಂದರು.
ಮಂಗಳೂರು ವಿವಿ ಎನ್ನೆಸ್ಸೆಸ್ ಸಂಯೋಜನಕಿ ವಿನುತಾ ರೈ ಗಾಂಧಿ ಸ್ಮರಣೆ ಮಾಡಿದರು. ಮನೋರೋಗ ತಜ್ಞ ಡಾ.ಶ್ರೀನಿವಾಸ ಭಟ್ ಮಾದಕ ವಸ್ತು ಜಾಗೃತಿ ಮಾಹಿತಿ ನೀಡಿದರು. ವ್ಯಸನ ಮುಕ್ತರಾಗಿ ಆದರ್ಶ ಜೀವನ ನಡೆಸುತ್ತಿರುವ ಹರೀಶ್ ಶೆಟ್ಟಿ ಪಂಜಿಮೊಗರು ಅವರಿಗೆ ಜನಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮನಪಾ ಮೇಯರ್ ಭಾಸ್ಕರ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಘವೇಂದ್ರ ಭಟ್ ಎಂ., ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ನ್ಯಾಯವಾದಿ ಮಹಮ್ಮದ್ ಇಸ್ಮಾಯಿಲ್, ಯೋಜನಾಧಿಕಾರಿ ಉಮರಬ್ಬ, ವಿವೇಕ್ ಪಾಸ್ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ಚೌಟ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಬೃಹತ್ ಜನಜಾಗೃತಿ ಜಾಥಾ ನಡೆಯಿತು.







