ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ರಾಜೇಶ್
ತುಮಕೂರು, ಅ.06: ಮಾಜಿ ಮೇಯರ್ ರವಿಕುಮಾರ್ ಕೊಲೆ ಕೇಸಿಗೆ ಸಂಬಂಧಿಸಿದಂತೆ ಆರೋಪಿಯನ್ನು ವಿಚಾರಣೆಗೆ ಕರೆದೊಯ್ಯುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಡೆದಿದೆ.
ಇತ್ತೀಚೆಗೆ ತುಮಕೂರು ನಗರದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಮಾಜಿ ಮೇಯರ್ ಹೆಚ್.ರವಿಕುಮಾರ್ ಕೊಲೆ ಕೇಸಿಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ರಾಜೇಶ್ ಅಲಿಯಾಸ್ ಕುಂದೂರು ರಾಜಿ ಎಂಬಾತನನ್ನು ಕೊಲೆಗೆ ಬಳಕೆ ಮಾಡಲಾಗಿದ್ದ ಮಾರಕಾಸ್ತ್ರಗಳ ಪತ್ತೆಗಾಗಿ ಕರೆದುಕೊಂಡು ಹೋಗುತ್ತಿದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭ ಆತನ ತೊಡೆಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದರಿಂದ ಗಾಯಗೊಂಡಿರುವ ಆರೋಪಿ ರಾಜೇಶ್ ಮತ್ತು ಆರೋಪಿಯ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಾಜಿ ಮೇಯರ್ ಹಾಗೂ ರೌಡಿಶೀಟರ್ ಹೆಚ್.ರವಿಕುಮಾರ್ ಅವರನ್ನು 7 ಜನ ದುಷ್ಕರ್ಮಿಗಳ ತಂಡವೊಂದು ಕೊಲೆ ಮಾಡಿತ್ತು. ಈ ಸಂಬಂಧ ಕೊಲೆಯಲ್ಲಿ ಹೆಚ್ಚಿನದಾಗಿ ಹೆಸರು ಕೇಳಿ ಬಂದಿದ್ದ ಸುಜೀತ್ ಭಾರ್ಗವ ಮತ್ತು ಮತ್ತೊಬ್ಬ ಆರೋಪಿ ಚಿಕ್ಕಬಳ್ಳಾಪುರ ಪೊಲೀಸರಿಗೆ ಶರಣಾಗಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು. ಸದರಿ ಆರೋಪಿಗಳಲ್ಲಿ ಒಬ್ಬನಾದ ರಾಜೇಶ್ ಅಲಿಯಾಸ್ ಕುಂದೂರು ರಾಜ ಎಂಬಾತನನ್ನು ವಿಚಾರಣೆಗೆ ತುಮಕೂರು ತಾಲೂಕು ಲಿಂಗದಹಳ್ಳಿ ಅರಣ್ಯ ಪ್ರದೇಶಕ್ಕೆ ಕರೆದೊಯ್ಯುವ ವೇಳೆ ಇನ್ಸ್ ಪೆಕ್ಟರ್ ರವಿಕುಮಾರ್ ಮೇಲೆ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ತುಮಕೂರು ನಗರ ಡಿವೈಎಸ್ಪಿ ನಾಗರಾಜು ತಮ್ಮ ಸರ್ವಿಸ್ ರಿವಾಲ್ವರ್ ನಿಂದ ಆರೋಪಿ ರಾಜೇಶ್ ತೊಡೆಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಇಬ್ಬರೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.







