ದಸರಾ ಉದ್ಘಾಟನಾ ಆಹ್ವಾನ ಖುಷಿ ತಂದಿದೆ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ

ಬೆಂಗಳೂರು, ಅ. 6: ದಸರಾ ಉದ್ಘಾಟನೆಗೆ ಆಹ್ವಾನ ನೀಡಿರುವುದು ಆಶ್ಚರ್ಯದ ಸಂಗತಿ. ದಿಗ್ಗಜರಿಗೆ ದೊರೆತಿದ್ದ ಅವಕಾಶ ಸಿಕ್ಕಿರುವುದು ಆಶ್ಚರ್ಯದ ಜೊತೆಗೆ ಖುಷಿ ತಂದಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಹರ್ಷ ವ್ಯಕ್ತಪಡಿಸಿದರು.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೆ.ಎಸ್.ನಿಸಾರ್ ಅಹ್ಮದ್, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಕಂಬಾರರಂತಹ ಪ್ರಸಿದ್ಧ ಸಾಹಿತಿಗಳು ದಸರಾ ಉದ್ಘಾಟನೆ ಮಾಡಿದ್ದು, ಈ ಬಾರಿ ನನಗೆ ಅವಕಾಶ ಸಿಕ್ಕಿರುವುದು ವಿಶ್ವವಿದ್ಯಾಲಯದಲ್ಲಿ ಮೊದಲ ರ್ಯಾಂಕ್ ಪಡೆದಷ್ಟು ಸಂತೋಷ ತಂದಿದೆ ಎಂದು ಹೇಳಿದರು.
ದಸರಾ ಬರೀ ಹಬ್ಬವಲ್ಲ. ಅದೊಂದು ನಾಡಹಬ್ಬ. ಎಲ್ಲ ರಾಜ್ಯಗಳು ಒಂದೊಂದು ಪರಂಪರೆ ಉಳಿಸಿಕೊಂಡಿವೆ. ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬ, ಕೇರಳದಲ್ಲಿ ಓಣಂ, ತಮಿಳುನಾಡು ಪೊಂಗಲ್ ಹೀಗೆ ಕರ್ನಾಟಕದಲ್ಲಿ ದಸರಾ ಎಂದು ಅಭಿಪ್ರಾಯಪಟ್ಟರು.
ಮಾಧ್ಯಮದವರ ಜತೆಗಿನ ಸಂವಾದ: ಸರಕಾರ ಮತ್ತು ರಾಜಮನೆತನದ ದಸರಾ ಉತ್ಸವದಲ್ಲಿ ಯಾವುದು ನಿಜವಾದ ದಸರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಧಾಮೂರ್ತಿ, ನನಗೆ ಈಗಲೂ ಗೊತ್ತಿಲ್ಲ, ಇದರ ಚರ್ಚೆ ಅಗತ್ಯವಿಲ್ಲ. ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲ ಉಳಿದಿರೋದು ಮಹಾರಾಜರಿಂದ ಎಂದರು.
ನಿಮಗೆ ಯಾರು ಆದರ್ಶ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾರೂ ಆದರ್ಶರಲ್ಲ, ಒಬ್ಬ ವ್ಯಕ್ತಿಯನ್ನು ಮಾರ್ಗದರ್ಶಕರನ್ನಾಗಿ ಮಾಡಿಕೊಂಡು ಅವರನ್ನು ತೀರ ಹತ್ತಿರದಿಂದ ಕಂಡಾಗ ಇಂತಹ ವ್ಯಕ್ತಿಯ ಆದರ್ಶಗಳನ್ನು ನಾನು ಅನುಸರಿಸಿದೆನಾ ಎಂದು ಅನ್ನಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಹಲವು ಮಕ್ಕಳು ಅನೇಕ ಮಹನೀಯರನ್ನು ಆದರ್ಶ ವ್ಯಕ್ತಿಗಳನ್ನಾಗಿ ಇಟ್ಟುಕೊಂಡಿರುತ್ತಾರೆ. ಆದರೆ ನನಗೆ ಯಾರೂ ಆದರ್ಶವಾಗಿರದೆ, ನಾನು ಇಚ್ಛಿಸುವ ಕೆಲಸವೇ ನನ್ನ ಆದರ್ಶವಾಗಿತ್ತು ಎಂದು ಉತ್ತರಿಸಿದರು.
ನಗರದ ಸ್ವಚ್ಛತೆ, ವಾಹನ ದಟ್ಟಣೆ ಬೇರೆ ದೇಶಗಳಿಗೆ ಹೋಲಿಸಿದಾಗ ಏನನ್ನಿಸುತ್ತದೆ ಎಂಬ ಪ್ರಶ್ನೆಗೆ, ಬೇರೆ ದೇಶಗಳಂತೆ ಕಟ್ಟುನಿಟ್ಟಿನ ಕಾನೂನು ನಿಯಮಗಳನ್ನು ಪಾಲಿಸಿದಾಗ ಸಿಲಿಕಾನ್ ಸಿಟಿಯಲ್ಲಿ ಸ್ವಚ್ಛತೆ ಹಾಗೂ ವಾಹನ ದಟ್ಟಣೆಯನ್ನು ತುಂಬಾ ಸರಳವಾಗಿ ನಿಯಂತ್ರಿಸಬಹುದು. ಅಲ್ಲದೆ, ನಾರಾಯಣಮೂರ್ತಿ ಬೆಂಗಳೂರಿಗೆ ಬಂದು ನಗರದಲ್ಲಿ ವಾಹನ ದಟ್ಟಣೆ ಮಾಡಿದ್ದಾರೆ ಎಂಬ ಆರೋಪ ಮಾಡುತ್ತಾರೆ. ಆದರೆ, ರಾಜ್ಯದ ಜನರು ಮೊದಲು ಬೇರೆ ದೇಶ ರಾಜ್ಯಕ್ಕೆ ಉದ್ಯೋಗ ಅರಸಿ ಹೋಗುತ್ತಿದ್ದರು. ಈಗ ಉದ್ಯೋಗ ರಾಜ್ಯದಲ್ಲೇ ಸಿಗುತ್ತಿರುವುದರಿಂದ ನಾಡು-ನುಡಿ ಉಳಿಯುತ್ತಿದೆ ಎಂದು ತಿಳಿಸಿದರು.
ಇಲ್ಲಿಯವರೆಗೂ ನಾನು ಮಾಡಬೇಕಿತ್ತು ಅನ್ನಿಸುವ ವಿಷಯವೇನಾದರೂ ಎಂಬ ಪ್ರಶ್ನೆಗೆ, ಬಾಲ್ಯದಲ್ಲಿಯೇ ಯೋಗ, ಈಜು ಕಲಿಯುವ ಮಹಾದಾಸೆ ಇತ್ತು. ಇದೆಲ್ಲ ಎಲ್ಲರಿಗೂ ಅನ್ನಿಸುತ್ತೆ. ವರುಷಗಳುರುಳಿದಂತೆ ನನಗೂ ಅದನ್ನು ಮಾಡಬೇಕಿತ್ತು ಎಂದು ಅನಿಸಿದ್ದು ನಿಜ ಎಂದರು.
ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿದ್ದು ಹೇಗೆ ಎಂದರೆ, ಮೇಷ್ಟ್ರು ಕುಟುಂಬದ ಹಿನ್ನೆಲೆಯಾದ್ದರಿಂದ ಪುಸ್ತಕಗಳನ್ನು ಓದುವ ಅಭ್ಯಾಸವಿತ್ತು. ಹಾಗಾಗಿ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿತು, 29ವಯಸ್ಸಿಗೆ ಕನ್ನಡದಲ್ಲಿ ಪುಸ್ತಕ ಬರೆದೆ, ಇಂಗ್ಲಿಷ್‌ನಲ್ಲಿ ಬರೆದರೆ ಎಲ್ಲರಿಗೂ ತಲುಪುತ್ತದೆ ಎಂದು 52 ವಯಸ್ಸಿಗೆ ಇಂಗ್ಲಿಷ್‌ನಲ್ಲಿ ಬರೆಯಲು ಶುರು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯದರ್ಶಿ ಕಿರಣ್ ಮತ್ತಿತರ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು.







