ಹದಿಹರೆಯರ ಮಕ್ಕಳ ಮನಸ್ಥಿತಿಯನ್ನು ಅರಿತುಕೊಳ್ಳಿ: ಡಾ.ಭಂಡಾರಿ
ರಕ್ಷಕ-ಶಿಕ್ಷಕರ ಸಮಾವೇಶ

ಉಡುಪಿ, ಅ.6: ಪೋಷಕರು ತಮ್ಮ ಮಕ್ಕಳನ್ನು ಹೊಗಳುವಾಗ ಎಲ್ಲರ ಮುಂದೆ ಹೊಗಳಿ, ತೆಗಳುವಾಗ ಒಬ್ಬರೇ ಇದ್ದಾಗ ತೆಗಳಬೇಕು. ಹದಿ ಹರೆಯದ ಮಕ್ಕಳ ಮನಸ್ಥಿತಿಯನ್ನು ಪೋಷಕರು ಹಾಗೂ ಪ್ರಾಧ್ಯಾಪಕರು ಸೂಕ್ತ ರೀತಿಯಲ್ಲಿ ಅರ್ಥಮಾಡಿಕೊಂಡು ಅವರ ಸಾಮಾಜಿಕ ಬೆಳವಣಿಗೆಗೆ ಪರಿಣಾಮಕಾರಿ ಯಾದ ಪಾತ್ರವನ್ನು ವಹಿಸಬೇಕು ಎಂದು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ, ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ನಡೆದ ರಕ್ಷಕ ಶಿಕ್ಷಕ ಸಮಾವೇಶ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮಾದಕ ವ್ಯಸನಗಳಿಗೆ ವಿದ್ಯಾರ್ಥಿಗಳು ಬಲಿಯಾಗದ ಹಾಗೆ ಶೈಕ್ಷಣಿಕ ಸಂಸ್ಥೆಗಳು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಮಕ್ಕಳನ್ನು ಗೌರವಿಸಿ, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ತಮ್ಮನ್ನು ತಾವು ಉತ್ತಮಪಡಿಸಿ ಕೊಳ್ಳುತ್ತಾ ತಮ್ಮ ಮಕ್ಕಳಿಗೆ ಮಾದರಿ ಮತ್ತು ಮಾರ್ಗದರ್ಶಕರಾಗಬೇಕು. ವಿದ್ಯಾರ್ಥಿಗಳ ಮೊಬೈಲ್ ಬಳಕೆ ಹಾಗೂ ಆರ್ಥಿಕ ಚಟುವಟಿಕೆಗಳ ಬಗ್ಗೆ ಪೋಷಕರು ನಿಗಾವಹಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಸಭೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ರಾಘವೇಂದ್ರ, ಉಪಾಧ್ಯಕ್ಷರಾಗಿ ಜ್ಯೋತಿ ಆಚಾರ್ಯ, ಜಂಟಿ ಕಾರ್ಯದರ್ಶಿ ಭಾಸ್ಕರ ಆಯ್ಕೆಯಾದರು. ಶಿಕ್ಷಕ-ರಕ್ಷಕ ಸಂಘದ ಸಂಚಾಲಕ ಡಾ.ಗೋಪಾಲಕೃಷ್ಣ ಎಂ. ಗಾಂವ್ಕರ್ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಉಮೇಶ್ ಪೈ ವಂದಿಸಿದರು. ಪ್ರೊ.ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.







