ಹನೂರು: ಅಕ್ರಮ ಮರಳು ಶೇಖರಣೆ ಅಡ್ಡೆಗೆ ಪೊಲೀಸ್ ದಾಳಿ

ಹನೂರು,ಅ.6: ಅಕ್ರಮ ಮರಳು ಶೇಖರಣೆ ಜಾಗಕ್ಕೆ ಜಿಲ್ಲಾ ಅಪರಾದ ದಳ ಇನ್ಸ್‍ಪೆಕ್ಟರ್ ರವೀಂದ್ರ ರವರ ನೇತೃತ್ವದಲ್ಲಿ ದಾಳಿ ಮಾಡಿರುವ ಘಟನೆ ಹೂಗ್ಯಂ ಮತ್ತು ನೆಲ್ಲೂರು ಗ್ರಾಮಗಳಲ್ಲಿ ನಡೆದಿದೆ.
ರಾಮಾಪುರ ವ್ಯಾಪ್ತಿಯ ಹೂಗ್ಯಂ ಗ್ರಾಮದಲ್ಲಿ 3 ಕಡೆ, ನೆಲ್ಲೂರು ಗ್ರಾಮದಲ್ಲಿ ಒಂದು ಕಡೆ ಖಾಸಗಿ ಜಮೀನಿನಲ್ಲಿ ಸುಮಾರು 10 ಟಿಪ್ಪರ್ ಲಾರಿಗಳಷ್ಟು ಮರಳು ದಾಸ್ತಾನು ಮಾಡಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹಾಗೂ ಜಿಲ್ಲಾ ಅಪರಾದ ದಳ ಇನ್ಸ್ ಪೆಕ್ಟರ್ ರವೀಂದ್ರ ರವರ ನೇತೃತ್ವದಲ್ಲಿ ದಾಳಿ ನಡೆಸಿದೆ. ಈ ವೇಳೆ ಅಲ್ಲಿದ್ದವರು ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ದಾಳಿ ಸಂದರ್ಭ ಸಬ್ ಇನ್ಸ್ ಪೆಕ್ಟರ್ ನಾಗೇಶ್, ಇನ್ಸ್ ಪೆಕ್ಟರ್ ಪರಶುರಾಮ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಅಕ್ರಮ ಮರಳು ಸಂಗ್ರಹಣೆಯಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಕುರಿತು ಹೂಗ್ಯಂ ಹಾಗೂ ನೆಲ್ಲೂರಿನ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು, ಅಕ್ರಮ ಮರಳು ಸಾಗಾಟದಲ್ಲಿ ಕೈಜೋಡಿಸುವ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಮೀನಿನಲ್ಲಿ ಆಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ್ದ ಆರೋಪಿಗಳಾದ ಹೂಗ್ಯಂ ಮತ್ತು ನೆಲ್ಲೂರಿನ ಪರಮಶಿವ, ರವಿ, ಬಸವರಾಜು, ಮಾದೇಶ, ಪಳನಿಸ್ವಾಮಿ, ಕುಮಾರ, ಮಾಣಿಕ್ಯ, ಕನ್ನಪ್ಪಯ್ಯ ಎಂಬವರ ವಿರುದ್ದ ಪ್ರಕರಣ ದಾಖಲಾಗಿದ್ದು, ಈಗಾಗಲೇ ರಾಮಾಪುರ ಪೋಲಿಸ್ ಠಾಣೆಗೆ ಈ ಪ್ರಕರಣವನ್ನು ವರ್ಗಾಯಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
- ರವೀಂದ್ರ, ಜಿಲ್ಲಾ ಅಪರಾದ ದಳ ಇನ್ಸ್‍ಪೆಕ್ಟರ್, ಚಾಮರಾಜನಗರ







