ಐಆರ್‌ಸಿಟಿಸಿ ಹಗರಣ: ರಾಬ್ರಿ ದೇವಿ, ತೇಜಸ್ವಿ ಯಾದವ್‌ಗೆ ಜಾಮೀನು

ಹೊಸದಿಲ್ಲಿ, ಅ.6: ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್‌ಗೆ ದಿಲ್ಲಿಯ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತದ ಜಾಮೀನು ಮುಚ್ಚಳಿಕೆ ನೀಡುವಂತೆ ನ್ಯಾಯಾಲಯ ತಿಳಿಸಿದೆ.
ಈ ಪ್ರಕರಣದಲ್ಲಿ ಇವರಿಗೆ ನ್ಯಾಯಾಲಯ ಇದಕ್ಕೂ ಮೊದಲು ನೀಡಿದ್ದ ಜಾಮೀನು ಅವಧಿ ಅ.6ಕ್ಕೆ(ಶನಿವಾರ) ಅಂತ್ಯಗೊಂಡಿತ್ತು. ಲಾಲೂಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದ ಸಂದರ್ಭ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ (ಐಆರ್‌ಸಿಟಿಸಿ)ನ ಎರಡು ಹೋಟೆಲ್‌ಗಳ ನಿರ್ವಹಣಾ ಗುತ್ತಿಗೆಯನ್ನು ಖಾಸಗಿಯವರಿಗೆ ವಹಿಸಿ ಕೊಟ್ಟ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿಬಿಐ ಪ್ರಕರಣ ದಾಖಲಿಸಿದೆ.
ಇದೇ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಹಣ ಅಕ್ರಮ ಸಾಗಣೆ ಪ್ರಕರಣದಲ್ಲಿ ನ್ಯಾಯಾಲಯವು ರಾಬ್ರಿ ದೇವಿ, ತೇಜಸ್ವಿ ಯಾದವ್ ಹಾಗೂ ಇತರರಿಗೆ ನವೆಂಬರ್ 19ರವರೆಗೆ ಮಧ್ಯಂತರ ಜಾಮೀನು ಮಂಜೂರುಗೊಳಿಸಿದೆ. ಅಲ್ಲದೆ ಸಿಬಿಐ ಮತ್ತು ಇಡಿ ಸಲ್ಲಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಲಾಲೂಪ್ರಸಾದ್ ಯಾದವ್‌ರನ್ನು ನವೆಂಬರ್ 19ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವ ವಿಚಾರಣೆಗೆ ಹಾಜರುಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.





