ಆ್ಯಪಲ್ ಕಾರ್ಯನಿರ್ವಹಣಾಧಿಕಾರಿ ಹತ್ಯೆ ಪ್ರಕರಣ: ಮೂವರು ಎಸ್‌ಎಚ್‌ಒ, ನಾಲ್ವರು ಕಾನ್ಸ್‌ಟೆಬಲ್ ಅಮಾನತು
ಲಕ್ನೋ, ಅ. 6: ಕಳೆದ ವಾರ ಆ್ಯಪಲ್ ಕಾರ್ಯನಿರ್ವಹಣಾಧಿಕಾರಿ ಯನ್ನು ಗುಂಡು ಹಾರಿಸಿ ಹತ್ಯೆಗೈದ ತಮ್ಮ ಸಹೋದ್ಯೋಗಿಯನ್ನು ಬೆಂಬಲಿಸಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿದ ಮೂವರು ಠಾಣಾಧಿಕಾರಿಗಳನ್ನು ವಜಾ ಮಾಡಲಾಗಿದೆ, ನಾಲ್ವರು ಕಾನ್ಸ್‌ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ ಹಾಗೂ ಇಬ್ಬರು ನಿವೃತ್ತ ಪೊಲೀಸರನ್ನು ಬಂಧಿಸಲಾಗಿದೆ.
ತಪಾಸಣೆ ನಡೆಸಲು ಕಾರು ನಿಲ್ಲಿಸದ ವಿವೇಕ್ ತಿವಾರಿಯನ್ನು ಗುಂಡು ಹಾರಿಸಿ ಹತ್ಯೆಗೈದ ಬಳಿಕ ಬಂಧಿತರಾಗಿರುವ ತಮ್ಮ ಸಹೋದ್ಯೋಗಿ ಯನ್ನು ಬೆಂಬಲಿಸಿ ಈ ಪೊಲೀಸರು ಕಪ್ಪು ಕೈ ಪಟ್ಟಿ ಧರಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯ ರಾಜಧಾನಿಯ ನಾಕಾ, ಗುಂಡಂಬಾ ಹಾಗೂ ಅಲಿಗಂಜ್ ಪೊಲೀಸ್ ಠಾಣೆಗಳಲ್ಲಿನ ಮೂವರು ಉಸ್ತುವಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲಿ ನಿಯೋಜಿಸಲಾಗಿದ್ದ ಮೂವರು ಕಾನ್ಸ್‌ಟೆಬಲ್‌ಗಳನ್ನು ವಜಾಗೊಳಿಸಲಾಗಿದೆ. ಇಲಾಖೆ ತನಿಖೆ ನಡೆಯುತ್ತಿದೆ ಎಂದು ಡಿಐಜಿ (ಕಾನೂನು ಹಾಗೂ ಸುವ್ಯವಸ್ಥೆ) ಪ್ರವೀಣ್ ಕುಮಾರ್ ಹೇಳಿದ್ದಾರೆ. ಮೂರು ಪೊಲೀಸ್ ಠಾಣೆಗಳ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದಾಗ್ಯೂ, ಈ ಭಾವಚಿತ್ರ ಸದ್ಯದ್ದೇ ಅಥವಾ ಹಿಂದಿನದೇ ಎಂಬುದನ್ನು ಅವರು ದೃಢಪಡಿಸಿಲ್ಲ.





