ಗಂಜಿಮಠ ಸಮೀರ್ ಕೊಲೆ ಪ್ರಕರಣ: ಯುವಕ ವಶಕ್ಕೆ ?

ಸಮೀರ್
ಮಂಗಳೂರು, ಅ.6: ಗಂಜಿಮಠ ನಿವಾಸಿ ಮುಹಮ್ಮದ್ ಸಮೀರ್ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ದೇವತಾನಪಟ್ಟಿ ಪೊಲೀಸರು ಸ್ಥಳೀಯ ಯುವಕನೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದೇವತಾನಪಟ್ಟಿ ಪೊಲೀಸರು ದ.ಕ. ಜಿಲ್ಲೆಯಲ್ಲಿ ಹಲವು ದಿನಗಳಿಂದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯುವಕನನ್ನು ವಶಕ್ಕೆ ಪಡೆದಿರುವ ತನಿಖಾ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಕೆಲವು ದಿನಗಳ ಹಿಂದೆಯೂ ಸೂರಲ್ಪಾಡಿ, ಕಾಪು, ಕಡಂದಲೆ, ಬೆಳ್ಮಣ್, ಮೂಡುಬಿದಿರೆಯ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಜೊತೆಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳು ಬಳಸಿದ್ದಾರೆನ್ನಲಾದ ಕಾರೊಂದು ಮೂಡುಬಿದಿರೆ ಸಮೀಪ ಪತ್ತೆಯಾಗಿದ್ದು, ಅದನ್ನು ತಮಿಳುನಾಡಿನ ದೇವತಾನಪಟ್ಟಿ ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
‘ಸಮೀರ್ ಕೊಲೆಗೆ ಸಂಬಂಧಿಸಿದ ಡಿಎನ್ಎ ವರದಿ, ಮರಣೋತ್ತರ ವರದಿಗಳನ್ನು ಕುಟುಂಬಕ್ಕೆ ನೀಡಿಲ್ಲ. ಕಳೆದ ವಾರ ತಮಿಳುನಾಡಿನ ಪೊಲೀಸರು ಮನೆಗೆ ಬಂದು ಕೆಲ ಮಾಹಿತಿಗಳನ್ನು ಪಡೆದುಕೊಂಡು ಹೋಗಿದ್ದರು. ಮತ್ತೆ ಮೂರು ದಿನಗಳ ಬಳಿಕ ಮಾಹಿತಿಗಾಗಿ ಬರುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಎಲ್ಲಿಯವರೆಗೆ ಬಂದಿದೆ ಎನ್ನುವ ಮಾಹಿತಿ ಇಲ್ಲ’ ಎಂದು ಮೃತ ಸಮೀರ್ ಕುಟುಂಬದ ಮೂಲಗಳು ತಿಳಿಸಿವೆ.







