ಚಿತ್ರರಂಗ ಪ್ರವೇಶ ಆಸೆಪಟ್ಟಿದ್ದಲ್ಲ, ಆಕಸ್ಮಿಕ: ಚಲನಚಿತ್ರ ಸಾಹಿತಿ ಡಾ.ಬಿ.ಎಲ್.ವೇಣು

ಬೆಂಗಳೂರು, ಅ.6: ನಾನು ಚಿತ್ರರಂಗಕ್ಕೆ ಆಕಸ್ಮಿಕವಾಗಿ ಕಾಲಿಟ್ಟಿದ್ದೇನೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು, ಸಿನಿಮಾಗೆ ಬರೆಯಬೇಕು ಅಥವಾ ಸಾಹಿತ್ಯ ಬರೆಯಬೇಕು ಎಂಬ ಆಸೆ ಇರಲಿಲ್ಲ. ಆದರೆ, ಖ್ಯಾತ ಸಂಗೀತ ನಿರ್ದೇಶಕನಾಗಬೇಕು ಎಂಬುದು ಬಹುದೊಡ್ಡ ಕನಸಾಗಿತ್ತು ಎಂದು ಚಲನಚಿತ್ರ ಸಾಹಿತಿ ಡಾ.ಬಿ.ಎಲ್.ವೇಣು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು..
ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಬೆಳ್ಳಿ ಹೆಜ್ಜೆ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು, ಸಾಧನೆ ಮಾಡಬೇಕೆಂದು ನಾನು ಕಷ್ಟಪಟ್ಟಿಲ್ಲ. ಆದರೆ, ಸಾಹಿತ್ಯ ಬರೆಯಬೇಕು ಎಂದು ತುಂಬಾ ಕಷ್ಟಪಟ್ಟಿದ್ದೇನೆ, ಶ್ರಮ ಹಾಕಿದ್ದೇನೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ದೊಡ್ಡ ಸಾಹಿತಿಗಳು, ಕತೆಗಾರರ ಕಥೆಗಳು ಸಿನೆಮಾಗಳಾಗುತ್ತಿದ್ದವು. ಆದರೆ, ಮೊಟ್ಟ ವೊದಲ ಬಾರಿಗೆ ನನ್ನದೊಂದು ಸಣ್ಣ ಕಥೆ ‘ದೊಡ್ಡ ಮನೆ ಎಸ್ಟೇಟ್’ ಎಂಬ ಸಿನೆಮಾ ಆಯಿತು. ಆದರೆ, ಈ ಚಿತ್ರದ ನಿರ್ದೇಶಕ ನನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದರು. ಮುಂದೆ ಒಂದು ದಿನ ಅದೇ ಅವರನ್ನು ತುಳಿಯುವಂತೆ ಮಾಡಿತು ಎಂದ ಅವರು, ದೊಡ್ಡ ಕಾರ್ಯಕ್ರಮವೊಂದರಲ್ಲಿ ವೇಣು ಬಂದಿದ್ದಾರೆ ಸೀಟು ಖಾಲಿ ಮಾಡಿಕೊಡಿ ಎಂದು ಅವರಿಗೆ ಹೇಳಿದ್ದರು ಎಂದು ತಮ್ಮ ಕಹಿ ನೆನಪುಗಳನ್ನು ಮೆಲುಕು ಹಾಕಿದರು.
ರಾಜ್ಯಮಟ್ಟದ ಸ್ಪರ್ಧೆಗಾಗಿ ಪರಾರ್ಜಿತ ಕಥೆಯನ್ನು ಬರೆದಿದ್ದೆ. ಅದು ಪ್ರಥಮ ಬಹುಮಾನವನ್ನೂ ಪಡೆಯಿತು. ಅನಂತರ ನಿರ್ದೇಶಕರಾದ ಅಶ್ವತ್ ಮತ್ತು ರತ್ನಾಕರ್ ಮನೆಗೆ ಬಂದಿದ್ದರು. ಅಲ್ಲದೆ, ಜಿ.ಟಿ.ಜಯಕುಮಾರ್ ಅದನ್ನು ಸಿನೆಮಾ ಮಾಡಲು ಮುಂದಾಗಿದ್ದರು. ಆ ಚಿತ್ರದಲ್ಲಿ ಅನಂತ್‌ನಾಗ್ ಸೇರಿದಂತೆ ಅನೇಕ ನಟರು ನಟಿಸಿದ್ದರೂ, 10 ದಿನಗಳ ಶೂಟಿಂಗ್ ನಂತರ ಚಿತ್ರೀಕರಣ ನಡೆಯಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅದನ್ನು ಪುಟ್ಟಣ್ಣ ಕಣಗಾಲ್ ಮುಗಿಸಿದ್ದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಹೇಳಿದರು.
ನಾನು ಚಿತ್ರ ಸಾಹಿತ್ಯದ ಕಡೆಗೆ ಬಂದ ನಂತರ ನನ್ನ ಕಥೆ ಆಧಾರಿತ ಚಿತ್ರಗಳಿಗೆ ಉದಯ ಶಂಕರ್ ಡೈಲಾಗ್ ಬರೆಯಬೇಕು ಹಾಗೂ ಹಂಸಲೇಖ ಸಂಗೀತ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು ಎಂದ ಅವರು, ನಿರ್ದೇಶಕ ಸಿದ್ದಲಿಂಗಯ್ಯ ಅವರು ಕಥೆ ಕೇಳುತ್ತಿದ್ದರು. ಎಲ್ಲವನ್ನೂ ಸಿನಿಮಾ ಮಾಡೋಣ ಎನ್ನುತ್ತಿದ್ದರು. ಆದರೆ, ಸಿನಿಮಾ ಮಾಡುತ್ತಿರಲಿಲ್ಲ ಎಂದು ಅವರು ನೆನಪಿಸಿಕೊಂಡರು.
ಪರಾರ್ಜಿತ, ಪ್ರಾಯ ಪ್ರಾಯ ಪ್ರಾಯ ಚಿತ್ರಗಳು ಯಶಸ್ವಿಯಾದವು. ಅನಂತರ ನಮ್ಮದೇ ಕಥೆ, ಕಾದಂಬರಿಗೆ ಸಂಭಾಷಣೆ ಬರೆಯುತ್ತಿದ್ದೆ. ಅಲ್ಲದೆ, ಬೇರೆಯವರ ಕಾದಂಬರಿಗಳಿಗೆ ಸಂಭಾಷಣೆ ಬರೆಯುವ ಅವಕಾಶ ಸಿಗುತ್ತಿತ್ತು. ಆದರೆ, ಸಂಭಾಷಣೆ ಬರೆಯುವುದು ತುಂಬಾ ಕಷ್ಟದ ಕೆಲಸ. ಚಿತ್ರಕಥೆಯನ್ನು ಓದಿ ಜೀರ್ಣಿಸಿಕೊಳ್ಳಬೇಕು ಎಂದು ವೇಣು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಚಲನಚಿತ್ರ ನಟ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಸಾಹಿತ್ಯದ ಒಂದು ವಲಯದಲ್ಲಿ ಸಿನಿಮಾ ಬಗ್ಗೆ ಅಸ್ಪಶ್ಯ ಭಾವನೆ ಇರುವ ಕಾರಣ ಚಿತ್ರೋದ್ಯಮಕ್ಕೆ ಸಾಹಿತಿಗಳು ಬರಲು ಹಿಂಜರಿಯುತ್ತಾರೆ. ಸಾಹಿತಿಗಳು ನಾವು ಸಿನಿಮಾರಂಗಕ್ಕೆ ಹೋದರೆ ಕೆಡುತ್ತೇವೆ, ನಿರ್ದೇಶಕರಿಗೆ ಬೇಕಾದ ರೀತಿಯಲ್ಲಿ ಬರೆಯಬೇಕು, ಅದರಿಂದ ನಮ್ಮ ಸಾಹಿತ್ಯ ಕಳೆಗುಂದುತ್ತದೆ ಎಂಬ ಆತಂಕ ಇರುವ ಕಾರಣದಿಂದ ಸಿನಿಮಾರಂಗಕ್ಕೆ ಬರಲು ಹಿಂಜರಿಯುತ್ತಾರೆ. ಆ ರೀತಿಯ ಆತಂಕವನ್ನು ದೂರ ಮಾಡಿ ಸಾಹಿತಿಗಳು ಸಿನೆಮಾರಂಗದತ್ತ ಬರತೊಡಗಿದಾಗ ಸಿನಿಮಾಕ್ಷೇತ್ರದಲ್ಲಿ ಬಹು ದೊಡ್ಡ ಬದಲಾವಣೆ ಕಾಣಲು ಸಾಧ್ಯ.
- ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ







