ಟರ್ಕಿ ಅಧಿಕಾರಿಗಳು ಕಚೇರಿ ಪ್ರವೇಶಿಸಿ ತನಿಖೆ ಮಾಡಲಿ: ಸೌದಿ ಯುವರಾಜ
ಟರ್ಕಿ ಕಾನ್ಸುಲೇಟ್ ಕಚೇರಿಯಲ್ಲಿ ಸೌದಿ ಪತ್ರಕರ್ತ ನಾಪತ್ತೆ

ಜಿದ್ದಾ, ಅ. 6: ನಾಪತ್ತೆಯಾಗಿರುವ ಪತ್ರಕರ್ತ ಜಮಾಲ್ ಖಶೋಗಿಗಾಗಿ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯ ಕಾನ್ಸುಲೇಟ್‌ನಲ್ಲಿ ಟರ್ಕಿ ಅಧಿಕಾರಿಗಳು ಶೋಧ ನಡೆಸಬಹುದು ಎಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಮೂರು ದಿನಗಳ ಹಿಂದೆ ಸೌದಿ ಅರೇಬಿಯ ಕಾನ್ಸುಲೇಟ್ ಕಚೇರಿಯನ್ನು ಪ್ರವೇಶಿಸಿದ ಬಳಿಕ ನಾಪತ್ತೆಯಾಗಿದ್ದಾರೆ ಎಂಬುದಾಗಿ ವರದಿಯಾಗಿರುವುದನ್ನು ಸ್ಮರಿಸಬಹುದಾಗಿದೆ.
‘‘ನಮ್ಮ ಕಾನ್ಸುಲೇಟ್ ಕಚೇರಿಯಲ್ಲಿ ಶೋಧ ನಡೆಸಲು ಟರ್ಕಿ ಸರಕಾರ ಸ್ವತಂತ್ರವಾಗಿದೆ. ನಮ್ಮ ಕಾನ್ಸುಲೇಟ್ ಆವರಣವು ಸಾರ್ವಭೌಮ ಪ್ರದೇಶವಾಗಿದೆ. ಆದರೆ, ಅದನ್ನು ಪ್ರವೇಶಿಸಿ ಶೋಧ ನಡೆಸಲು ನಾವು ಅವಕಾಶ ನೀಡುತ್ತೇವೆ. ಟರ್ಕಿ ಅಧಿಕಾರಿಗಳು ಏನು ಮಾಡಬೇಕೆಂದು ಬಯಸಿದ್ದಾರೋ ಅದನ್ನು ಮಾಡಬಹುದಾಗಿದೆ. ಅವರು ಶೋಧ ನಡೆಸಲು ಮುಂದೆ ಬಂದರೆ, ಖಂಡಿತವಾಗಿಯೂ ನಾವು ಅವರಿಗೆ ಅವಕಾಶ ನೀಡುತ್ತೇವೆ. ಅಡಗಿಸಿಡಲು ನಮ್ಮಲ್ಲಿ ಏನೂ ಇಲ್ಲ’’ ‘ಬ್ಲೂಮ್‌ಬರ್ಗ್’ ಟಿವಿಗೆ ಶುಕ್ರವಾರ ನೀಡಿದ ಸಂದರ್ಶನವೊಂದರಲ್ಲಿ ಸೌದಿ ಯುವರಾಜ ಹೇಳಿದರು.
ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ತನ್ನ ಟರ್ಕಿಯ ಗೆಳತಿಯನ್ನು ಮದುವೆಯಾಗುವುದಕ್ಕಾಗಿ ಮೊದಲ ಹೆಂಡತಿಯಿಂದ ವಿಚ್ಛೇದನ ದಾಖಲೆಗಳನ್ನು ಪಡೆಯಲು ಅವರು ಈ ವಾರದ ಆದಿ ಭಾಗದಲ್ಲಿ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್ ಕಚೇರಿಯನ್ನು ಪ್ರವೇಶಿಸಿದ್ದರು.
ಬಳಿಕ ಅವರು ಕಚೇರಿಯಿಂದ ಹೊರಬಂದಿಲ್ಲ ಎಂಬುದಾಗಿ ಅವರ ಗೆಳತಿ ಮತ್ತು ಓರ್ವ ಸ್ನೇಹಿತ ಹೇಳಿದ್ದಾರೆ.





