ಬೆಂಗಳೂರು: ಅ.13 ರಿಂದ ಮೊದಲ ಸಾಹಿತ್ಯ ಸಂವಾದ ಕಾರ್ಯಕ್ರಮ
ಬೆಂಗಳೂರು, ಅ.6: ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಸಂವಾದ-ಸಹಿಷ್ಣುತೆ ಉಳಿಸುವ ಸಲುವಾಗಿ ಅ.13 ಮತ್ತು 14 ರಂದು ಚಿತ್ರದುರ್ಗದಲ್ಲಿ ಮೊದಲ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಭಾರತೀಯ ಸಾಹಿತ್ಯ ಮತ್ತು ಬಂಡಾಯದ ಪರಂಪರೆ ಎನ್ನುವ ವಿಷಯದ ಮೇಲೆ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಸಂವಾದ ನಡೆಯಲಿದೆ. ಕನ್ನಡವನ್ನು ಒಳಗೊಂಡಂತೆ ದಕ್ಷಿಣ ಭಾರತದ ಎಲ್ಲ ಭಾಷಾ ಸಾಹಿತ್ಯದ ಜತೆಗೆ ಹಿಂದಿ, ಉರ್ದು, ಪಂಜಾಬಿ, ಅಸ್ಸಾಮಿ, ಕಾಶ್ಮೀರಿ, ಗುಜರಾತಿ, ಮರಾಠಿ ಸಾಹಿತ್ಯಗಳ ಬಂಡಾಯ ಪರಂಪರೆಯ ಬಗ್ಗೆಯೂ ವಿಷಯ ಮಂಡನೆ ಮಾಡಲಾಗುತ್ತದೆ. ಅನಂತರ ಅದರ ಬಗ್ಗೆಯೂ ಸಂವಾದ ನಡೆಯುತ್ತದೆ. ಅಲ್ಲದೆ, ಪ್ರಾದೇಶಿಕ ಭಾಷೆಗಳಾದ ಬ್ಯಾರಿ, ಕೊಡವ, ಕೊಂಕಣಿ, ತುಳು, ಲಂಬಾಣಿ ಸಾಹಿತ್ಯದೊಳಗಿನ ಬಂಡಾಯ ಪರಂಪರೆ ಬಗ್ಗೆಯೂ ಉಪನ್ಯಾಸಗಳು ನಡೆಯುತ್ತವೆ ಎಂದು ಅವರು ಎಂದು ತಿಳಿಸಿದ್ದಾರೆ.
ಪ್ರಜಾಸತ್ತಾತ್ಮಕ ಸಮಾಜದಲ್ಲಿ ಸಂವಾದ ಮುಖ್ಯ ಸಾಧನ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂವಾದಕ್ಕೆ ಮಹತ್ವವಿದೆ. ದೇಶದ ಇಂದಿನ ವಾತಾವರಣವು ಸಂವಾದ ಸಂಸ್ಕೃತಿಯನ್ನು ಸಂಹರಿಸುವ ಸಂಭ್ರಮವನ್ನು ಪ್ರಕಟಿಸುತ್ತಿದೆ. ಇದು ಸಮೂಹ ಸನ್ನಿಹ ಸಂಘರ್ಷಗಳಿಗೆ ಕಾರಣವಾಗುತ್ತಿದೆ.
ಭಿನ್ನಾಭಿಪ್ರಾಯಗಳ ನಡುವೆಯೂ ಸಂವಾದ ನಡೆಸಿ ಸಹಿಷ್ಣುತೆಯನ್ನು ಕಾಪಾಡಿಕೊಳ್ಳುವ ಸಮಯ ಹಿಂದಕ್ಕೆ ಸರಿದಿದೆ. ಇಂತಹ ಸಂದರ್ಭದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಜವಾಬ್ದಾರಿ ದೊಡ್ಡದು. ಸಮೂಹ ಸನ್ನಿಯ ಸಮಕಾಲೀನ ಸಂದರ್ಭವನ್ನು ಸಂವಾದದ ಕಡೆಗೆ ಕೊಂಡೊಯ್ಯುವ ಸಲುವಾಗಿ ಯುವಪೀಳಿಗೆಯನ್ನು ಜಾಗೃತಗೊಳಿಸಬೇಕಿದೆ. ಅದಕ್ಕಾಗಿ ಸಂವಾದ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ಬರಗೂರು ರಾಮಚಂದ್ರಪ್ಪ ಮಾಹಿತಿ ನೀಡಿದ್ದಾರೆ.







