ಮಂಡ್ಯ: ಮೂರು ಸರಕಾರಿ ಶಾಲೆಗಳ ದತ್ತು ವಿಚಾರ; ಜಿಪಂ ಸಿಇಒ ಜೊತೆ ಪ್ರಕಾಶ್ ರೈ ಚರ್ಚೆ

ಮಂಡ್ಯ,ಅ.6: ತನ್ನ ಪ್ರಕಾಶ್‍ರಾಜ್ ಫೌಂಡೇಷನ್ ವತಿಯಿಂದ ಜಿಲ್ಲೆಯ ಮೂರು ಸರಕಾರಿ ಶಾಲೆಗಳನ್ನು ದತ್ತು ಪಡೆದು ಮಾದರಿಯಾಗಿ ರೂಪಿಸುವ ಕುರಿತಂತೆ ಬಹುಭಾಷಾ ಚಿತ್ರನಟ ಹಾಗೂ ಚಿಂತಕ ಪ್ರಕಾಶ್ ರೈ ಶನಿವಾರ ಜಿಲ್ಲಾ ಪಂ. ಸಿಇಓ ಕೆ.ಯಾಲಕ್ಕಿಗೌಡ ಅವರೊಂದಿಗೆ ಚರ್ಚಿಸಿದರು.
ಮದ್ದೂರು ತಾಲೂಕು ಮೆಣಸಗೆರೆ ಗ್ರಾಮದ ಪ್ರಾಥಮಿಕ ಸರಕಾರಿ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ಸ್ ಶತಮಾನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೃಷ್ಣರಾಜಪೇಟೆ ಪಟ್ಟಣದ ಶತಮಾನೋತ್ಸವ ಶಾಲೆಯನ್ನು ದತ್ತು ಪಡೆಯುವುದಾಗಿ ಪ್ರಕಾಶ್ ರೈ ಮಾಹಿತಿ ನೀಡಿದರು.
ಸರಕಾರಿ ಶಾಲೆಗಳನ್ನು ಸಬಲೀಕರಣ ಮಾಡಲು ಪ್ರಕಾಶ್ ರೈ ಮುಂದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಿಇಒ ಯಾಲಕ್ಕಿಗೌಡ, ಅಗತ್ಯ ರೀತಿಯ ಸಹಕಾರವನ್ನು ಇಲಾಖೆ ವತಿಯಿಂದ ಒದಗಿಸುವುದಾಗಿ ಭರವಸೆ ನೀಡಿದರು.
ಮುಂದಿನ ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಶಾಲೆಗಳಿಗೆ ಹೆಚ್ಚು ಮಕ್ಕಳನ್ನು ಆಕರ್ಷಿಸಲಾಗುವುದು. ಶಾಲೆಗಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಕೊಠಡಿ ದುರಸ್ತಿ, ಬಯಲು ರಂಗಮಂದಿರ, ಆಟದ ಮೈದಾನ, ಡೆಜಿಟಲ್ ಲೈಬ್ರರಿ, ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ರೈ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎ.ಎಸ್.ರಾಜೀವ, ಮರಿಹೆಗ್ಗಡೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು ಹಾಗೂ ಫೌಂಡೇಷನ್‍ನ ಸದಸ್ಯರು ಹಾಜರಿದ್ದರು.







