ಮೈಸೂರು: ನಾಲ್ಕನೇ ದಿನಕ್ಕೆ ಮುಂದುವರೆದ ಪೌರಕಾರ್ಮಿಕರ ಮುಷ್ಕರ
ಸಚಿವ ಜಿಟಿಡಿ ನಡೆಸಿದ ಸಭೆ ಮತ್ತೊಮ್ಮೆ ವಿಫಲ
ಮೈಸೂರು,ಅ.6: ಗುತ್ತಿಗೆ ಪೌರಕಾರ್ಮಿಕರ ಖಾಯಂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಪೌರಕಾರ್ಮಿಕರ ಮುಷ್ಕರ ನಾಲ್ಕನೆ ದಿನಕ್ಕೆ ಮುಂದುವರೆದಿದ್ದು, ಸಚಿವ ಜಿ.ಟಿ.ದೇವೇಗೌಡ ನಡೆಸಿದ ಸಂಧಾನ ಮತ್ತೊಮ್ಮೆ ಇಂದು ವಿಫಲಗೊಂಡಿದೆ.
ಪೌರಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ಕೆಲಸಕ್ಕೆ ಹಾಜರಾಗದೆ ನಿರಂತರವಾಗಿ ಹೋರಾಟ ಮಂದುವರೆಸಿದ್ದಾರೆ. ನಾಡಹಬ್ಬ ವಿಶ್ವವಿಖ್ಯಾತ ದಸರೆ ಆರಂಬಕ್ಕೆ ಐದು ದಿನಗಳಷ್ಟೇ ಬಾಕಿ ಇರುವ ಸಂದರ್ಭದಲ್ಲಿ ಪೌರಕಾರ್ಮಿಕರ ಪ್ರತಿಟನೆಯಿಂದಾಗಿ ಮೈಸೂರು ನಗರದಲ್ಲಿ ಉಂಟಾಗಿರುವ ಕಸದ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.
ಸಚಿವ ಜಿ.ಟಿ.ದೇವೇಗೌಡ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೌರಕಾರ್ಮಿಕರೊಂದಿಗೆ ಸಭೆ ನಡೆಸಿ ಮುಷ್ಕರ ಆರಂಭವಾದ ದಿನದಿಂದಲೂ ಮುಖ್ಯಮಂತ್ರಿಗಳಿಗೆ ಸಮಸ್ಯೆ ಕುರಿತು ತಿಳಿಸಿದ್ದೇನೆ. ಗುರುವಾರ ವಿಧಾನಸಭೆಯಲ್ಲಿ ಅರ್ಧತಾಸು ಚರ್ಚೆ ನಡೆದಿದೆ ಎಂದು ಹೇಳಿದರು.
ಪೌರಕಾರ್ಮಿಕರ ಸಮಸ್ಯೆ ಕೇವಲ ಮೈಸೂರಿನಲ್ಲಿ ಮಾತ್ರವಲ್ಲ, ರಾಜ್ಯಾದಾದ್ಯಂತ ಇದ್ದು, ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಈಗಾಗಲೇ ಬೆಳಗಿನ ಉಪಾಹಾರ ನೀಡುವ ಕುರಿತು ಇಂದಿರಾ ಕ್ಯಾಂಟೀನ್‍ನಿಂದ ತಿಂಡಿಕೊಡುವಂತೆ ಸೂಚಿಸಲಾಗಿದೆ. ಪ್ರಸ್ತುತ ಇರುವ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ವಿಚಾರ, 700 ಮಂದಿಗೆ ಒಬ್ಬ ಪೌರಕಾರ್ಮಿಕನೆಂಬ ನೀತಿ ಕೈಬಿಡುವುದರ ಬಗ್ಗೆ ಚರ್ಚಿಸಲಾಗುವುದು. ಅಂಬೇಡ್ಕರ್ ಜಯಂತಿಗೆ 20 ಸಾವಿರ ರೂ. ಬೋನಸ್ ಸೇರಿದಂತೆ ಹಲವು ಬೇಡಿಕೆಗಳನ್ನು ಒಂದು ತಿಂಗಳಲ್ಲಿ ರಾಜ್ಯಮಟ್ಟದಲ್ಲಿ ಸಭೆ ನಡೆಸಿ ಈಡೇರಿಸುವುದಾಗಿ ತಿಳಿಸಿದರು.
ಆದರೂ ಇದಕ್ಕೆ ಬಗ್ಗದ ಪೌರಕಾರ್ಮಿಕರು ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಪಟ್ಟುಹಿಡಿದ ಹಿನ್ನಲೆಯಲ್ಲಿ ರವಿವಾರ ಮತ್ತೊಮ್ಮೆ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆಯನ್ನು ಮುಕ್ತಾಯಗೊಳಿಸಲಾಯಿತು.







