ದಾಳಿಯ ಬೆದರಿಕೆ: ಬಿಹಾರ, ಗುಜರಾತ್ ತೊರೆಯುತ್ತಿರುವ ನೂರಾರು ವಲಸೆ ಕಾರ್ಮಿಕರು
“ಇಂತಹ ಬೆದರಿಕೆ ಇದುವರೆಗೆ ಎದುರಿಸಿಲ್ಲ”

ಅಹ್ಮದಾಬಾದ್, ಅ.7: 14 ತಿಂಗಳ ಮಗುವಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಗೈದ ನಂತರ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಆರಂಭವಾದ ಹಲ್ಲೆ ಪ್ರಕರಣಗಳಿಂದ ಹೆದರಿ ಈ ಎರಡೂ ರಾಜ್ಯಗಳನ್ನು ನೂರಾರು ವಲಸೆ ಕಾರ್ಮಿಕರು ತೊರೆಯುತ್ತಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ನಡೆದ ದಾಳಿಗಳಿಗೆ ಸಂಬಂಧಿಸಿ 150 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಹ್ಮದಾಬಾದ್ ನಿಂದ 116 ಕಿ.ಮೀ. ದೂರದಲ್ಲಿರುವ ಸಬರ್ ಕಾಂತದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಪರಿಸ್ಥಿತಿ ಇದೀಗ ಹತೋಟಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಅತ್ಯಾಚಾರ ಪ್ರಕರಣದ ನಂತರ ಕೆಲವರು ಬೇರೆ ರಾಜ್ಯಗಳಿಂದ ಗುಜರಾತ್ ಗೆ ಬಂದಿರುವ ಕಾರ್ಮಿಕರನ್ನು ಗುರಿಯಾಗಿಸುತ್ತಿದ್ದಾರೆ. ಇದು ಒಪ್ಪುವಂತಹದ್ದಲ್ಲ” ಎಂದು ಗುಜರಾತ್ ಡಿಜಿಪಿ ಶಿವಾನಂದ್ ಝಾ ಹೇಳಿದ್ದಾರೆ.
ಕೆಲವು ಕಿಡಿಗೇಡಿಗಳು ಅಕ್ಟೋಬರ್ 8ರೊಳಗೆ ಗುಜರಾತನ್ನು ತೊರೆಯುವಂತೆ ವಲಸೆ ಕಾರ್ಮಿಕರಿಗೆ ಎಚ್ಚರಿಕೆ ನೀಡಿದ್ದಾರೆ. “ ಅವರು ನಮ್ಮ ಮನೆಗೆ ಬಂದು ರಾಜ್ಯವನ್ನು ತೊರೆಯುವಂತೆ ಎಚ್ಚರಿಕೆ ನೀಡಿದರು” ಎಂದು ಅಹ್ಮದಾಬಾದ್ ನಲ್ಲಿ ನೆಲೆಸಿರುವ ದೇವೇಂದ್ರ ರಾಥೋಡ್ ಹೇಳುತ್ತಾರೆ. ಇವರು ಮಧ್ಯ ಪ್ರದೇಶದಿಂದ ಗುಜರಾತ್ ಗೆ ಬಂದಿದ್ದರು.
“ನಾವು ಇಲ್ಲಿಯೇ ಜನಿಸಿ, ಇಲ್ಲೇ ಬೆಳೆದೆ. ನಮಗೆ ನಮ್ಮದೇ ಆದ ಮನೆಯಿದೆ. ಜಾಗವಿದೆ, ನಾವು ಎಲ್ಲಿಗೂ ಹೋಗಲು ಸಾಧ್ಯವಿಲ್ಲ” ಎಂದು ರಾಥೋಡ್ ಹೇಳುತ್ತಾರೆ. “1200ರಿಂದ 1400 ವಲಸೆ ಕಾರ್ಮಿಕರು ಇಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ 150 ಮಂದಿ ಕಾರ್ಮಿಕರು ರಾಜ್ಯ ತೊರೆದಿದ್ದಾರೆ. ಪೊಲೀಸರು ಇಲ್ಲಿ ಗಸ್ತು ತಿರುಗುತ್ತಿದ್ದರೂ ದುಷ್ಕರ್ಮಿಗಳು ಬೆದರಿಕೆ ಒಡ್ಡುತ್ತಲೇ ಇದ್ದಾರೆ” ಎಂದು ಪಪ್ಪು ಚೊಟ್ಟೆಲಾಲ್ ಎಂಬವರು ಹೇಳುತ್ತಾರೆ.
“ಗುಜರಾತ್ ನಲ್ಲಿ ಈ ಹಿಂದೆ ಇಂತಹ ಬೆದರಿಕೆ ಎದುರಿಸಿಯೇ ಇಲ್ಲ. ಇದೀಗ ನಮಗೆ ಭಯವಾಗುತ್ತಿದೆ” ಎಂದು ಮತ್ತೊಬ್ಬ ವಲಸೆ ಕಾರ್ಮಿಕ ಹೇಳುತ್ತಾರೆ.







