ಗಂಜಿಮಠ ಸಮೀರ್ ಕೊಲೆ ಪ್ರಕರಣ: ಪತ್ನಿ, ಆಕೆಯ ಪ್ರಿಯಕರ ಪೊಲೀಸ್ ವಶಕ್ಕೆ ?

ಸಮೀರ್
ಮಂಗಳೂರು, ಅ. 7: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗಂಜಿಮಠ ಸಮೀಪದ ಮುಹಮ್ಮದ್ ಸಮೀರ್ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ನ ಪತ್ನಿ ಫಿರ್ದೌಸ್ ಮತ್ತಾಕೆಯ ಪ್ರಿಯಕರನನ್ನು ಬೆಂಗಳೂರು-ತಮಿಳುನಾಡು ಗಡಿ ಪ್ರದೇಶವಾದ ಹೊಸೂರು ಠಾಣೆಯ ಪೊಲೀಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳುನಾಡಿನ ದೇವತಾನಪಟ್ಟಿ ಪೊಲೀಸರು ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈ ಸಂದರ್ಭ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತ ನೀಡಿದ ಮಾಹಿತಿಯಂತೆ ಸಮೀರ್ನ ಪತ್ನಿ ಫಿರ್ದೌಸ್ ಮತ್ತಾಕೆಯ ಪ್ರಿಯಕರ ಕಾರ್ಕಳ ಮೂಲದ ಆಸಿಫ್ ಎಂಬಾತನನ್ನು ರವಿವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೆ.13ರಂದು ಮುಹಮ್ಮದ್ ಸಮೀರ್ ತನ್ನ ಪತ್ನಿ ಫಿರ್ದೌಸ್ ಮತ್ತು 3 ತಿಂಗಳ ಹೆಣ್ಣು ಮಗುವಿನೊಂದಿಗೆ ತನ್ನ ಮನೆಯಿಂದ ಬೆಂಗಳೂರಿಗೆ ವಿಮಾನದ ಮೂಲಕ ತೆರಳಿದ್ದರು.
ಸೆ.15ರಂದು ಸಂಜೆ ತನ್ನ ತಾಯಿಗೆ ದೂರವಾಣಿ ಕರೆ ಮಾಡಿದ್ದ ಸಮೀರ್ ತಾನು ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದು, ಆ ಬಳಿಕ ಸಮೀರ್ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಮಧ್ಯೆ ಸೆ.18ರಂದು ಫಿರ್ದೌಸ್ ತನ್ನ ಮಗುವಿನೊಂದಿಗೆ ತಾಯಿಯ ಮನೆಯಾದ ಕಾಪು ಸಮೀಪದ ಮಜೂರ್ಗೆ ಬಂದಿದ್ದ ವಿಷಯ ತಿಳಿದ ಸಮೀರ್ನ ಮನೆಮಂದಿ ಅಲ್ಲಿಗೆ ತೆರಳಿ ಆಕೆಯಲ್ಲಿ ಸಮೀರ್ನ ಬಗ್ಗೆ ವಿಚಾರಿಸಿದಾಗ ಆತ ಬೇರೆ ಹುಡುಗಿಯ ಸಂಪರ್ಕದಲ್ಲಿದ್ದು, ತನ್ನನ್ನು ಮತ್ತು ಮಗುವನ್ನು ಕಾಪುವಿನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಳು. ಆ ಬಳಿಕ ಸಮೀರ್ನ ತಂದೆ ಅಹ್ಮದ್ ಸಾಹೇಬ್ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸಮೀರ್ ಪತ್ತೆಯಾಗಿರಲಿಲ್ಲ. ಬದಲಾಗಿ ಸೆ.16ರಂದು ತಮಿಳುನಾಡಿನ ಕೇನಿ ಜಿಲ್ಲೆಯ ಕೃಷ್ಣಗಿರಿ ಸಮೀಪದ ದೇವತಾನಪಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡಪ್ರದೇಶದಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ವಾರಸುದಾರರಿಗಾಗಿ ಕಾದ ಪೊಲೀಸರು ಬಳಿಕ ದಫನ ವ್ಯವಸ್ಥೆ ಮಾಡಿದ್ದರು.
ಅಪರಿಚಿತ ಮೃತದೇಹ ಪತ್ತೆಯಾದ ಬಗ್ಗೆ ಸೆ. 23ರಂದು ಮಾಹಿತಿ ಪಡೆದ ಸಮೀರ್ನ ಮನೆಮಂದಿ ಸಮೀರ್ನ ವಾಚ್, ಬೆಲ್ಟ್, ಬಟ್ಟೆಬರೆ ಮತ್ತು ಶೂವನ್ನು ಆಧರಿಸಿ ಮೃತದೇಹ ಗುರುತು ಪತ್ತೆ ಹಚ್ಚಿದ್ದರು. ಅಲ್ಲದೆ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಮತ್ತು ಮುಖ ಗುರುತು ಸಿಗದಂತೆ ಆ್ಯಸಿಡ್ ಎರಚಿದ ಪರಿಣಾಮ ಇದೊಂದು ಕೊಲೆ ಎಂದು ಶಂಕಿಸಿ ದೂರು ನೀಡಲಾಗಿತ್ತು.
ಈ ಮಧ್ಯೆ ಫಿರ್ದೌಸ್ ಸೆ.19ರಿಂದ ನಾಪತ್ತೆಯಾದ ಬಗ್ಗೆ ಫಿರ್ದೌಸ್ ತಂದೆ ಕಾಪು ಠಾಣೆಯಲ್ಲಿ ದೂರು ನೀಡಿದ್ದರು. ಅತ್ತ ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಆಸಿಫ್ ಕೂಡಾ ಕಾಣೆಯಾಗಿದ್ದ. ಇಬ್ಬರೂ ವಿದೇಶಕ್ಕೆ ಪರಾರಿಯಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಇದೀಗ ಪೊಲೀಸರ ವಶಕ್ಕೊಳಗಾದ ಸ್ಥಳೀಯ ಯುವಕ ನೀಡಿದ ಮಾಹಿತಿಯ ಮೇರೆಗೆ ಫಿರ್ದೌಸ್ ಮತ್ತಾತನ ಪ್ರಿಯಕರ ಆಸಿಫ್ರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.







