ಅಪ್ರಾಪ್ತ ಪುತ್ರನ ಮದುವೆ ವಿರೋಧಿಸಿದ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ, ತಲೆ ಬೋಳಿಸಿದರು

ಗುವಾಹಟಿ,ಅ.7: ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಇನ್ನೂ ಮದುವೆ ವಯಸ್ಸಾಗಿರದ ತನ್ನ ಮಗನ ಮದುವೆಯನ್ನು ವಿರೋಧಿಸಿದ ಮಹಿಳೆಯನ್ನು ಕುಪಿತ ಗುಂಪೊಂದು ಥಳಿಸಿ,ಅರೆಬೆತ್ತಲುಗೊಳಿಸಿದ್ದಲ್ಲದೆ ಮೈಮೇಲೆ ಬಿಸಿನೀರನ್ನೂ ಎರಚಿದ ಹೇಯ ಘಟನೆ ಅಸ್ಸಾಮಿನ ಧುಬ್ರಿ ಜಿಲ್ಲೆಯ ಬೋತೆರ್‌ಹಾತ್ ಗ್ರಾಮದಲ್ಲಿ ನಡೆದಿದೆ.
ಅ.2ರಂದು ಈ ಘಟನೆ ನಡೆದಿದೆಯಾದರೂ,ಅದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕವಷ್ಟೇ ಶನಿವಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ರಶೀಮಾ ಬೀಬಿ(39) ಮಂತು ಶೇಖ್ ಎಂಬಾತನನ್ನು ಎರಡನೇ ಮದುವೆ ಮಾಡಿಕೊಂಡಿದ್ದು,ಈ ದಂಪತಿಗೆ 19ರ ಹರೆಯದ ಮಗನಿದ್ದಾನೆ. ಕೆಲವು ತಿಂಗಳ ಹಿಂದೆ ಮಂತು ಶೇಖ್ ಬೀಬಿಯ ವಿರೋಧವನ್ನೂ ಲೆಕ್ಕಿಸದೆ ಮಗನ ಮದುವೆಯನ್ನು ಅಪ್ರಾಪ್ತ ವಯಸ್ಕ ಹುಡುಗಿಯೊಂದಿಗೆ ನೆರವೇರಿಸಿದ್ದ. ಭಾರತದಲ್ಲಿ ಪುರುಷರು ಮದುವೆಯಾಗಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
ಬೀಬಿ ಈ ಬಗ್ಗೆ ಕಳೆದ ಆಗಸ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಿದ್ದರಿಂದ ಶೇಖ್ ಮತ್ತು ಹುಡುಗಿಯ ಕುಟುಂಬದವರು ಆಕೆಯ ಬಗ್ಗೆ ಅಸಮಾಧಾನಗೊಂಡಿದ್ದರು.ಅ.2ರಂದು ಮಹಿಳೆಯರೂ ಸೇರಿದಂತೆ ಹುಡುಗಿಯ ಕುಟುಂಬದ ಕೆಲವರು ಬೀಬಿಯನ್ನು ಹಿಡಿದು ಥಳಿಸಿ,ಆಕೆಯ ತಲೆ ಬೋಳಿಸಿದ್ದಲ್ಲದೆ ಅರೆಬೆತ್ತಲುಗೊಳಿಸಿ,ಮೈಮೇಲೆ ಬಿಸಿನೀರು ಎರಚಿದ್ದರು ಎಂದು ಧುಬ್ರಿ ಎಸ್‌ಪಿ ಲಾಂಗ್ನಿಟ್ ತೆರಂಗ್ ರವಿವಾರ ತಿಳಿಸಿದರು. ಹಾಡಹಗಲೇ ನಡುರಸ್ತೆಯಲ್ಲಿ ಸಾರ್ವಜನಿಕರ ಕಣ್ಣೆದುರೇ ಈ ಘಟನೆೆ ನಡೆದಿತ್ತು.
ಬೀಬಿಯ ಮೂರನೇ ಗಂಡ ಮೊಯಿನುಲ್ ಹಕ್ ನೀಡಿರುವ ದೂರಿನ ಮೇರೆಗೆ ಮೂವರು ಮಹಿಳೆಯರನ್ನು ಬಂಧಿಸಿರುವ ಪೊಲೀಸರು ಇತರರಿಗಾಗಿ ಶೋಧಿಸುತ್ತಿದ್ದಾರೆ. ಬೀಬಿಯನ್ನು ಪ.ಬಂಗಾಳದ ಕೂಚ್‌ಬಿಹಾರ್ ಆತ್ರೆಗೆ ದಾಖಲಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅಸ್ಸಾಮಿನಲ್ಲಿ ಬಾಲವಿವಾಹಗಳ ಸಂಖ್ಯೆ ಹೆಚ್ಚುತ್ತಿದ್ದು, 2017-18ರಲ್ಲಿ 317 ಬಾಲವಿವಾಹಗಳು ಅಲ್ಲಿ ನಡೆದಿವೆ.







