ಅ. 8ರಂದು ರಾಜ್ಯಕ್ಕೆ ಹಿಂಗಾರು ಪ್ರವೇಶಿಸುವ ಸಾಧ್ಯತೆ

ಬೆಂಗಳೂರು, ಅ.7 : ಕಳೆದ ವರ್ಷ ಅಕ್ಟೊಬರ್ ಅಂತ್ಯದಲ್ಲಿ ರಾಜ್ಯಕ್ಕೆ ಹಿಂಗಾರು ಪ್ರವೇಶಿಸಿದ್ದು, ಈ ವರ್ಷ ಅವಧಿಗೆ ಮುನ್ನವೇ ಅಂದರೆ ಅ. 8ರಂದು ಪ್ರವೇಶಿಸುವ ಮುನ್ಸೂಚನೆ ನೀಡಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಅ.13ರೊಳಗೆ ಚಂಡಮಾರುತ ಬೀಸುವ ಸೂಚನೆ ಇರುವುದಿರಿಂದ ಹಿಂಗಾರು ಮತ್ತಷ್ಟು ಚುರುಕಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
2016ರಲ್ಲಿ ರಾಜ್ಯದಲ್ಲಿ ಹಿಂಗಾರು ತೀವ್ರ ಕೊರತೆಯಾಗಿತ್ತು. ಆದರೆ ಈ ವರ್ಷ ವಾಡಿಕೆ ಹಿಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ಅಬ್ಬರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಕಾರವಾರ, ಮುದಗಾ, ಬೇಲೆಕೇರಿ, ತದಡಿ, ಹೊನ್ನಾವರ, ಭಟ್ಕಳ ಮುಂತಾದ ಪ್ರಮುಖ ಬಂದರುಗಳಲ್ಲಿ ಕೆಲವು ಆಳ ಸಮುದ್ರ ದೊಣಿಗಳು ದಡದಲ್ಲೆ ನಿಂತಿವೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ-ಉಡುಪಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕೆಲವೆಡೆ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.





