ನಾಯಕನೆಂದರೆ ಸಿದ್ದರಾಮಯ್ಯನವರಂತೆ ಇರಬೇಕು: ಸಚಿವ ಝಮೀರ್ ಅಹ್ಮದ್ ಖಾನ್

ಬೆಂಗಳೂರು, ಅ. 7: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು. ಇಡೀ ದೇಶದಲ್ಲೇ ಅಂತಹ ನಾಯಕ ಸಿಗುವುದಿಲ್ಲ. ನಾಯಕನೆಂದರೆ, ಸಿದ್ದರಾಮಯ್ಯನವರಂತೆ ಇರಬೇಕು ಎಂದು ಆಹಾರ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಿದ್ದರಾಮಯ್ಯ ಈ ಹಿಂದೆ 3,100 ಕೋಟಿ ರೂ.ಅನುದಾನ ನೀಡಿದ್ದರು. ಮತ್ತೊಮ್ಮೆ ಅವರು ಸಿಎಂ ಆಗಿದಿದ್ದರೆ 10 ಸಾವಿರ ಕೋಟಿ ರೂ. ನೀಡುತ್ತಿದ್ದರು ಎಂದು ತಿಳಿಸಿದರು.
ರಾಜ್ಯದ ಯಾವುದೇ ಭಾಗಕ್ಕೆ ಹೋದರು ಸಿದ್ದರಾಮಯ್ಯರ ಕೆಲಸಗಳನ್ನು ಜನ ನೆನಪಿಸಿಕೊಳ್ಳುತ್ತಾರೆ. ಅಲ್ಪಸಂಖ್ಯಾತರು ಸಿದ್ದರಾಮಯ್ಯ ಅವರನ್ನು ಸ್ಮರಿಸುತ್ತಾರೆ. ದೇವರ ಆಶೀರ್ವಾದದಿಂದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಝಮೀರ್ ಅಹ್ಮದ್ ಖಾನ್ ಆಶಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಐದು ವರ್ಷ ಆಡಳಿತ ಪೂರೈಸಬೇಕು. ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿಗೆ ಐದು ವರ್ಷ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿ ಎಂದು ಭರವಸೆ ನೀಡಿದ್ದಾರೆ. ಅದರಂತೆ ಐದು ವರ್ಷ ಕುಮಾರಸ್ವಾಮಿಯವರೇ ಸಿಎಂ ಆಗಿರುತ್ತಾರೆ. ಮುಂದಿನ ಅವಧಿಗೆ ಸಿದ್ದರಾಮಯ್ಯ ಅವರೇ ಸಿಎಂ ಆಗುತ್ತಾರೆಂದು ಅವರು ತಿಳಿಸಿದರು.







