ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು:ಶಾಸಕ ಬಿ.ಶ್ರೀರಾಮುಲು

ಬಳ್ಳಾರಿ, ಅ. 7: ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಶಾಸಕ ಬಿ. ಶ್ರೀರಾಮುಲು, ಬಳ್ಳಾರಿ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ರವಾನಿಸಲಾಗುವುದು ಎಂದು ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಕ್ಷೇತ್ರದ ಸಂಸದನಾಗಿ ಒಳ್ಳೆ ಕೆಲಸ ಮಾಡಿದ ತೃಪ್ತಿ ಇದೆ. ಸಂಸದರ ನಿಧಿ ಅತಿಹೆಚ್ಚು ಬಳಕೆಯಾಗಿದೆ. ಇನ್ನು ಎಲ್ಲ ಸಮುದಾಯಕ್ಕೂ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದೇನೆ ಎಂದರು.
ಬಳ್ಳಾರಿ ಕ್ಷೇತ್ರದಿಂದ ಪಕ್ಷದಲ್ಲಿ ಏಳೆಂಟು ಮಂದಿ ಅಭ್ಯರ್ಥಿಗಳು ಲೋಕಸಭೆಗೆ ಸ್ಪರ್ಧಿಸಲು ಆಕಾಂಕ್ಷಿಗಳಿದ್ದು, ಅವರೆಲ್ಲರ ಹೆಸರುಗಳನ್ನು ಪಕ್ಷದ ರಾಷ್ಟ್ರೀಯಾಧ್ಯಕ್ಷ, ರಾಜ್ಯಾಧ್ಯಕ್ಷರಿಗೆ ಕಳುಹಿಸಲಾಗುವುದು ಎಂದ ಅವರು, ಬಳ್ಳಾರಿಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ನೂರು ವರ್ಷ ಬದುಕಿ: ಅಧಿಕಾರ ಇರುವಷ್ಟು ದಿನ ನೀವು ಮತ್ತು ನಿಮ್ಮ ಕುಟುಂಬದವರು ಉದ್ಧಾರ ಆಗಿ, ನೂರು ವರ್ಷ ಬದುಕಿ ಬಾಳಿ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ ಶ್ರೀರಾಮುಲು, ರಾಜ್ಯ ಸರಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ದೂರಿದರು.
‘ಮುಖ್ಯಮಂತ್ರಿ ಕುಮಾರಸ್ವಾಮಿ ಕೊಟ್ಟ ಮಾತನ್ನು ಎಂದೂ ಉಳಿಸಿಕೊಂಡಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಜನತೆಯನ್ನು ಗೊಂದಲದಲ್ಲಿಟ್ಟಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರಕಾರ ಉಳಿಯುವುದಿಲ್ಲ. ಅವರ ಮಧ್ಯೆದಲ್ಲೆ ಕಚ್ಚಾಟವಾಗಿ ಸರಕಾರ ಉರುಳಲಿದೆ’
-ಬಿ.ಶ್ರೀರಾಮುಲು ಬಿಜೆಪಿ ಮುಖಂಡ







