ಸುಪ್ರೀಂ ತೀರ್ಪಿನ ಕುರಿತು ಮಾತುಕತೆ: ಪಿಣರಾಯಿ ಆಹ್ವಾನಕ್ಕೆ ಶಬರಿಮಲೆ ದೇಗುಲದ ಅರ್ಚಕರ ತಿರಸ್ಕಾರ
ಮಹಿಳೆಯರಿಗೆ ಶಬರಿಮಲೆ ಪ್ರವೇಶಾವಕಾಶ

ತಿರುವನಂತಪುರ,ಅ.7: ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಉದ್ದೇಶಿತ ಮಾತುಕತೆಯಿಂದ ಶಬರಿಮಲೆ ದೇಗುಲದ ಅರ್ಚಕರು ಹಿಂದೆ ಸರಿದಿರುವುದರಿಂದ ಎಲ್ಲ ವಯೋಮಾನಗಳ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನದಲ್ಲಿ ಪ್ರವೇಶಾವಕಾಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸಿರುವುದಕ್ಕಾಗಿ ಈಗಾಗಲೇ ಭಕ್ತರ ಕ್ರೋಧಕ್ಕೆ ಗುರಿಯಾಗಿರುವ ಕೇರಳ ಸರಕಾರಕ್ಕೆ ಹಿನ್ನಡೆಯುಂಟಾಗಿದೆ.
ಸರಕಾರವು ಮೊದಲು ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪಿನ ಪುನರ್‌ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಲಿ. ನಂತರ ನಾವು ಮಾತುಕತೆಗೆ ಮುಂದಾಗುತ್ತೇವೆ ಎಂದು ಶಬರಿಮಲೆ ದೇವಸ್ಥಾನದ ತಂತ್ರಿ ಮೋಹನಾರು ಕಂದರಾರು ಅವರು ಸುದ್ದಿಗಾರರಿಗೆ ತಿಳಿಸಿದರು.
ದೇವಸ್ಥಾನದಲ್ಲಿ ಋತುಚಕ್ರ ವಯಸ್ಸಿನ ಮಹಿಳೆಯರ ಪ್ರವೇಶವು ದೇವಳದ ಸಂಪ್ರದಾಯಗಳ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ ಮತ್ತು ಅದರ ದೈವತ್ವವನ್ನು ನಾಶಗೊಳಿಸುತ್ತದೆ ಎಂದ ಅವರು,ಮಹಿಳಾ ಪೊಲೀಸರ ನಿಯೋಜನೆ ದೇವಸ್ಥಾನದ ಸಂಪ್ರದಾಯಗಳನ್ನು ನಾಶ ಮಾಡುತ್ತದೆ ಎಂದರು.
ಶಬರಿಮಲೆ ದೇವಸ್ಥಾನದಲ್ಲಿ 600 ಮಹಿಳಾ ಪೊಲೀಸರನ್ನು ನಿಯೋಜಿಸುವುದಾಗಿ ಡಿಜಿಪಿ ಲೋಕನಾಥ ಬೆಹ್ರಾ ಹೇಳಿದ್ದರು.
ಪಂದಳಂ ರಾಜಕುಟುಂಬವೂ ಅರ್ಚಕರೊಂದಿಗೆ ಧ್ವನಿಗೂಡಿಸಿದೆ.
ಶಬರಿಮಲೆ ಕ್ಷೇತ್ರವಿರುವ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ರವಿವಾರ ಬಿಜೆಪಿ ಯುವ ಮೋರ್ಚಾದ ಕರೆಯ ಮೇರೆಗೆ ಬಂದ್ ಆಚರಿಸಲಾಗಿದ್ದು,ಪ್ರತಿಭಟನೆ ಹೆಚ್ಚಿನ ಪ್ರದೇಶಗಳಿಗೆ ಹರಡುತ್ತಿದೆ.
ಶನಿವಾರ ಕೊಟ್ಟಾಯಂ ಜಿಲ್ಲೆಯ ಚಂಗನಶ್ಶೇರಿಯಲ್ಲಿ ನಡೆದಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಂದಂಳಂ ರಾಜವಂಶಜ ಹಾಗೂ ಶಬರಿಮಲೆ ದೇಗುಲದ ಕಸ್ಟೋಡಿಯನ್ ಶಶಿಕುಮಾರ ವರ್ಮಾ ಮತ್ತು ಮುಖ್ಯ ಅರ್ಚಕ ರಾಜೀವರು ಕಂದರಾರು ಅವರು ಭಾಗವಹಿಸಿದ್ದರು.
ತಾನು ಆಸ್ತಿಕರ ಪರವಾಗಿದ್ದೇನೆಂದು ಕಾಂಗ್ರೆಸ್ ಸ್ಪಷ್ಟಪಡಿಸಿದ್ದರೆೆ,ಸರಕಾರವು ಭಕ್ತರ ಧಾರ್ಮಿಕ ನಂಬಿಕೆಗಳನ್ನು ಕಡೆಗಣಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕುರಿತಂತೆ ಉಂಟಾಗಿರುವ ಅಶಾಂತಿಗೆ ರಾಜಕೀಯ ವೈರಿಗಳು ಕಾರಣರು ಎಂದು ಕೇರಳದ ದೇವಸ್ಥಾನ ವ್ಯವಹಾರಗಳ ಸಚಿವ ಕೆ.ಸುರೇಂದ್ರನ್ ಅವರು ಯಾರನ್ನೂ ಹೆಸರಿಸದೆ ದೂರಿದ್ದಾರೆ. ಮತಗಳ ಮೇಲೆ ಕಣ್ಣಿಟ್ಟಿರುವ ಕೆಲವು ಪಕ್ಷಗಳು ತೊಂದರೆಯನ್ನು ಸೃಷ್ಟಿಸುತ್ತಿವೆ. ಅವರ ಕುಯುಕ್ತಿ ಯಶಸ್ವಿಯಾಗುವುದಿಲ್ಲ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಅವರು ಹೇಳಿದ್ದರು.







