ರಾಜಸ್ಥಾನ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಸೋಲನ್ನಪ್ಪಲಿದೆ: ಘನಶ್ಯಾಮ್ ತಿವಾರಿ

ಜೈಪುರ,ಅ.7: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಐತಿಹಾಸಿಕ ಸೋಲನ್ನು ಅನುಭವಿಸಲಿದೆ ಎಂದು ಮಾಜಿ ಬಿಜೆಪಿ ನಾಯಕ ಹಾಗೂ ಭಾರತ ವಾಹಿನಿ ಪಾರ್ಟಿ(ಬಿವಿಪಿ)ಯ ಅಧ್ಯಕ್ಷ ಘನಶ್ಯಾಮ ತಿವಾರಿ ಅವರು ರವಿವಾರ ಇಲ್ಲಿ ಹೇಳಿದರು.
ರಾಜ್ಯದಲ್ಲಿ ಡಿ.7ರಂದು ಮತದಾನ ನಡೆಯಲಿದೆ.
ಬಿಜೆಪಿಯು ರಾಜಸ್ಥಾನದಲ್ಲಿ ಮೇಲ್ಜಾತಿಗಳನ್ನು ವಂಚಿಸಿರುವುದರಿಂದ ಅದರ ವೋಟ್ ಬ್ಯಾಂಕ್ ದುರ್ಬಲವಾಗಿದೆ. ಮೇಲ್ಜಾತಿಗಳ ಪ್ರಬಲ ಬಿಜೆಪಿ ನಾಯಕರು ಪಕ್ಷವನ್ನು ತೊರೆದಿದ್ದಾರೆ ಎಂದೂ ತಿವಾರಿ ನುಡಿದರು.
ಬಿವಿಪಿಯು 200 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಲಿದೆ ಮತ್ತು ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ ಸರಕಾರ ರಚನೆಯ ಸ್ಥಿತಿಯಲ್ಲಿಲ್ಲ ಮತ್ತು ಬಿಜೆಪಿ ಐತಿಹಾಸಿಕ ಸೋಲನ್ನಪ್ಪಲಿದೆ. ಬಿವಿಪಿಯ ಬೆಂಬಲವಿಲ್ಲದೆ ರಾಜಸ್ಥಾನದಲ್ಲಿ ಸರಕಾರ ರಚನೆ ಅಸಾಧ್ಯ ಎಂದರು.
ಚುನಾವಣೆಯಲ್ಲಿ ಬಿಎಸ್‌ಪಿ ಸ್ಪರ್ಧೆ ಕುರಿತಂತೆ ಅವರು,ರಾಜ್ಯದಲ್ಲಿ ಬಿಎಸ್‌ಪಿಯ ಶೇಕಡಾವಾರು ಮತಗಳಿಕೆ ಕುಸಿಯುತ್ತಲೇ ಬಂದಿದೆ, ಹೀಗಾಗಿ ಆ ಪಕ್ಷದ ಸ್ಪರ್ಧೆ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದರು.
ಆರು ಬಾರಿ ಶಾಸಕರಾಗಿರುವ ಆರೆಸ್ಸೆಸ್ ಹಿನ್ನೆಲೆಯ ತಿವಾರಿ ರಾಜಸ್ಥಾನದಲ್ಲಿ ಬ್ರಾಹ್ಮಣ ಸಮುದಾಯದ ಪ್ರಮುಖರಾಗಿದ್ದಾರೆ ಮತ್ತು ವಸುಂಧರಾ ರಾಜೆ ನೇತೃತ್ವದ ಸರಕಾರದ ಕಟು ಟೀಕಾಕಾರರಾಗಿದ್ದಾರೆ.
ಬಿಜೆಪಿಯನ್ನು ತೊರೆದ ಅವರು ಬಿವಿಪಿಯನ್ನು ಸ್ಥಾಪಿಸಿದ್ದಾರೆ. ಅಶಿಸ್ತಿಗಾಗಿ ಪಕ್ಷವು ಅವರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿತ್ತು.
ರಾಜಸ್ಥಾನದಲ್ಲಿ ಬಿಜೆಪಿಯು 'ಅಂಗದನ ಪಾದ'ದಂತೆ ಭದ್ರವಾಗಿದೆ ಮತ್ತು ಅದನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆಯ ಕುರಿತಂತೆ ತಿವಾರಿ,ಶಾ ಅಥವಾ ರಾಜೆ ಅವರಿಗೆ ಪ್ರಜಾಪ್ರಭುತ್ವದಲ್ಲಿ ಗೌರವವಿಲ್ಲ. ಇಬ್ಬರೂ ಸರ್ವಾಧಿಕಾರಿ ಗಳಾಗಿದ್ದಾರೆ ಎಂದರು.







