ಟೋಲ್‍ಗೇಟ್ ವಿರೋಧಿಸಿ ಬೆಳ್ಮಣ್‍ನಲ್ಲಿ ಪ್ರತಿಭಟನೆ

ಬೆಳ್ಮಣ್, ಅ. 7: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಬೆಳ್ಮಣ್‍ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್‍ಗೇಟ್ ವಿರುದ್ಧ ಹೋರಾಟ ಸಮಿತಿಯ ನೇತೃತ್ವದಲ್ಲಿ ರವಿವಾರ ಬೃಹತ್ ಪ್ರತಿಭಟನೆ ನಡೆಯಿತು.
ಸಾವಿರಾರು ಮಂದಿ ಸೇರಿದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಟೋಲ್‍ಗೇಟ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಕಾನೂನು, ರಾಜಕೀಯ ಹಾಗೂ ಜನಾಂದೋಲನದ ಹೋರಾಟ ನಡೆಸುವುದಾಗಿ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಟೋಲ್‍ನ ಸಾಧಕ -ಬಾಧಕಗಳನ್ನು ಉಲ್ಲೇಖಿಸಿ ಟೋಲ್ ಪ್ರಕ್ರಿಯೆ ಕೈ ಬಿಡುವಂತೆ ಆಗ್ರಹಿಸಿದ ಮನವಿಯನ್ನು ಕಾರ್ಕಳ ಉಪತಹಶೀಲ್ದಾರ್ ಲೋಕೇಶ್‍ರವರ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶವಿಟ್ಠಲದಾಸ ಸ್ವಾಮೀಜಿ ಮಾತನಾಡಿ, ವಿಶ್ವವಿಖ್ಯಾತಿಯನ್ನು ಹೊಂದಿದ ಧಾರ್ಮಿಕ ಕೇಂದ್ರವಾಗಿರುವ ಅತ್ತೂರು ಚರ್ಚ್‍ಗೆ ಹೋಗುವ ಈ ಬೆಳ್ಮಣ್ ರಸ್ತೆಯಲ್ಲಿ ಮುಂದೆ ಸುಂಕ ಪಾವತಿಸಿ ಸಾಗಬೇಕಾದದು ನಮ್ಮ ದುರದೃಷ್ಠ ಎಂದರಲ್ಲದೆ, ಮೂಲಭೂತ ಸೌಕರ್ಯವನ್ನು ನೀಡಬೇಕಾದ ಸರಕಾರ, ನಮ್ಮ ತೆರಿಗೆ ದುಡ್ಡಿನಿಂದಲೇ ನಿರ್ಮಾಣಗೊಂಡ ರಸ್ತೆಗಳಿಗೆ ನಮ್ಮ ಕೈಯಿಂದಲೇ ಸುಂಕ ವಸೂಲಿ ಮಾಡ ಹೊರಟಿರುವುದೂ ಖೇದಕರ ಎಂದರು.
ಪಕ್ಷ, ಜಾತಿ, ಮತ ಭೇಧಗಳಿಲ್ಲದೇ ನಡೆಯುತ್ತಿರುವ ಈ ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ಘೋಷಿಸಿದರು. ಸಹೋದರತೆ, ಸೌಹಾರ್ದತೆಗೆ ಹೆಸರುವಾಸಿಯಾದ ಈ ತುಳುನಾಡಿನ ತುಳುವರೆಲ್ಲ ಒಗ್ಗಟ್ಟಾಗಿ ಟೋಲ್ ನಿರ್ಮಾಣವನ್ನು ವಿರೋಧಿಸುತ್ತೇವೆ ಎಂದರು. ಬೆಳ್ಮಣ್ ಸಂತ ಜೋಸೆಫರ ಚರ್ಚ್‍ನ ಪ್ರಧಾನ ಧರ್ಮಗುರು ರೆ.ಫಾ.ಎಡ್ವಿನ್ ಡಿಸೋಜಾ ಒಗ್ಗಟ್ಟಿನಿಂದ ಕೂಡಿದ ಈ ಹೋರಾಟಕ್ಕೆ ನ್ಯಾಯ ಸಿಗಲಿದೆ ಎಂದರು.
ಹೋರಾಟ ಸಮಿತಿಯ ಸಂಚಾಲಕ ಸುಹಾಸ್ ಹೆಗ್ಡೆ ಮಾತನಾಡಿ, ನಾವು ಶಾಂತಿಪ್ರಿಯರು, ನಮ್ಮ ಶಾಂತಿಯನ್ನು ಪರೀಕ್ಷಿಸುವ ಯತ್ನ ನಡೆಯುತ್ತಿದೆ. ಈಗ ಪ್ರಾರಂಭಿಸಿದ ಪ್ರತಿಭಟನೆ ಶಾಂತಿಯುತವಾದುದು ಈ ಹೋರಾಟಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ನಮಗೆ ಬೆತ್ತ, ಕೋಲು ಹಿಡಿಯಲೂ ತಿಳಿದಿದೆ, ಎತ್ತುಗಳನ್ನು ಓಡಿಸಿಯೂ ತಿಳಿದಿದೆ. ಮುಂದೆ ಬೆತ್ತ ಹಿಡಿಯುವ ಪರಿಸ್ಥಿತಿಯೂ ಬಂದೀತೆಂದು ಎಚ್ಚರಿಕೆ ನೀಡಿದರು.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯರ ಕನಸಿನ ಕೂಸಾಗಿರುವ ಈ ರಸ್ತೆಗೆ ರಸ್ತೆ ನಿರ್ಮಾಣ ಗೊಂಡ 5 ವರ್ಷಗಳ ಬಳಿಕ ಟೋಲ್ ಅಳವಡಿಸ ಹೊರಟಿರುವುದು ಮೂರ್ಖತನದ ಪರಮಾವಧಿ. ಮೂಲ ಒಪ್ಪಂದಗಳಿಲ್ಲದೆ ಟೋಲ್ ಅಳವಡಿಕೆ ಅನುಷ್ಠಾನ ಯತ್ನ ಖಂಡನೀಯ ಎಂದರು.
ಇನ್ನೆರಡು ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಟೋಲ್ ಅಳವಡಿಕೆ ಪ್ರಕ್ರಿಯೆಯನ್ನು ಹಿಂತೆಗೆಯುವಂತೆ ವಿನಂತಸುತ್ತೇನೆ ಎಂದರು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು ಈ ಭಾಗದ ಶಾಸಕನಾಗಿ ತನ್ನ ಇಚ್ಛಾಶಕ್ತಿಯನ್ನು ಬಳಸಿ ಜನರ ಹಿತಾಸಕ್ತಿಗಾಗಿ ಈ ಟೋಲ್ ವಿರುದ್ಧ ಹೋರಾಟ ನಡೆಸಲಿದ್ದೇನೆ ಎಂದರು. ದೊಡ್ಡ ಪ್ರಮಾಣದಲ್ಲಿ ಜನಾಂದೋಲನ ನಡೆಯುತ್ತಿರುವುದು ಸರಕಾರಕ್ಕೆ ಎಚ್ಚರಿಕೆಯ ಗಂಟೆ ಎಂದರು.
ವಿಧಾನಪರಿಷತ್ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ವಿದಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್, ಕಲ್ಯಾದ ಉಮಾಮಹೇಶ್ವರ ಸ್ವಾಮೀಜಿ, ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜೀವಂಧರ ಆಧಿಕಾರಿ, ಉಪಾಧ್ಯಕ್ಷ ಕಿನ್ನಿಗೋಳಿ ದುರ್ಗಾಪ್ರಸಾದ ಹೆಗ್ಡೆ, ಸುರೇಶ್ ಶೆಟ್ಟಿ ಗುರ್ಮೆ, ಕಾಪು ದೇವಿಪ್ರಸಾದ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಪಲಿಮಾರು ಚರ್ಚ್‍ನ ಧರ್ಮಗುರು ರೆ.ಫಾ. ರೋಕಿ ಡಿಸೋಜ, ಮಣಿರಾಜ ಶೆಟ್ಟಿ, ಮುನಿಯಾಲು ಉದಯ ಶೆಟ್ಟಿ, ಜಿಲ್ಲಾ ಪಂಚಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕಾರ್ಕಳ ಲಾರಿ ಮಾಲಕರ ಸಂಘದ ಅಧ್ಯಕ್ಷ ಉದಯ ಕುಮಾರ್, ಉದಯ ಎಸ್.ಕೋಟ್ಯಾನ್ ಮತ್ತಿತರ ನಾಯಕರು ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ರೇಷ್ಮಾ ಉದಯ ಶೆಟ್ಟಿ, ಎನ್.ಎಂ.ಹೆಗಡೆ, ಗಣಪತಿ ಆಚಾರ್ಯ, ಶ್ರೀಕಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







