ಪರಿಸರದ ಮೇಲೆ ಅನಗತ್ಯ ಹಸ್ತಕ್ಷೇಪ ಬೇಡ: ದಿನೇಶ್ ಕುಂಬ್ಳೆ
ಬೆಂಗಳೂರು, ಅ.7: ಪರಿಸರ ಮೇಲೆ ಅನಗತ್ಯ ಹಸ್ತಕ್ಷೇಪ ಮಾಡದಿರುವುದೆ ನಾವು ಪರಿಸರಕ್ಕೆ ಮಾಡುವ ದೊಡ್ಡ ಉಪಕಾರವೆಂದು ಪರಿಸರ ಛಾಯಾಗ್ರಾಹಕ ದಿನೇಶ್ ಕುಂಬ್ಳೆ ತಿಳಿಸಿದರು.
ರವಿವಾರ ಸಪ್ನಾ ಬುಕ್ ಹೌಸ್‌ನಲ್ಲಿ ‘ದಿ ವೈಲ್ಡ್’ ಪರಿಸರ ಛಾಯಾಚಿತ್ರಗಳ ಕುರಿತು ಮಾತನಾಡಿದ ಅವರು, ನಾವು ಗಿಡಗಳನ್ನು ನೆಡುವುದು ಬೇಡ. ಅದಕ್ಕೆ ನೀರು ಹಾಕಿ ಪೋಷಿಸುವುದು ಬೇಡ. ಪರಿಸರವನ್ನು ಸ್ವಚಂದವಾಗಿ ಇರಲು ಬಿಟ್ಟರೆ, ಪರಿಸರಕ್ಕೆ ನಾವು ಮಾಡುವ ದೊಡ್ಡ ಕೊಡುಗೆ ಎಂದು ತಿಳಿಸಿದರು.
ಕಾಡು, ಕಾಡು ಪ್ರಾಣಿಗಳು, ನೀರು, ಗಾಳಿ ನಡುವೆ ಅನ್ಯೋನ್ಯವಾದ ಸಂಬಂಧವಿದೆ. ಇದರಲ್ಲಿ ಒಂದಕ್ಕೆ ಸಮಸ್ಯೆಯಾದರು ಪರಿಸರದಲ್ಲಿ ಅಸಮತೋಲನ ಪ್ರಾರಂಭವಾಗುತ್ತದೆ. ಆದರೆ, ನಮ್ಮ ಮಾರುಕಟ್ಟೆ ವ್ಯವಸ್ಥೆ, ಉದ್ಯಮಿಗಳ ಸ್ವಾರ್ಥತೆಯು ಇಡೀ ಪರಿಸರದಲ್ಲಿ ಒಂದೇ ಏಟಿಗೆ ಕಬಳಿಸುತ್ತಾ ಸಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪರಿಸರದಲ್ಲಿರುವ ಪ್ರತಿಯೊಂದು ಜೀವಿಯ ಬದುಕು ವಿಶಿಷ್ಟ ಪೂರ್ಣವಾಗಿರುತ್ತದೆ. ಮನುಷ್ಯನನ್ನು ಹೊರತು ಪಡಿಸಿದರೆ, ಉಳಿದ ಯಾವ ಜೀವಿಯೂ ಮತ್ತೊಂದು ಜೀವಿಯ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಮಾನವ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ , ನೆಲ, ನೀರು ಸೇರಿದಂತೆ ಎಲ್ಲದರ ಮೇಲೆ ಹಸ್ತಕ್ಷೇಪ ಮಾಡಿ, ವಿಷಕಾರಿಗೊಳಿಸುತ್ತಿದ್ದಾನೆ . ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಛಾಯಾಚಿತ್ರಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇನೆಂದು ಅವರು ತಿಳಿಸಿದರು.







