ಮೌಲ್ಯಾಧಾರಿತ ಜೀವನ, ಸಂಸ್ಕಾರ ಮುಖ್ಯ: ನ್ಯಾ.ಎನ್.ಕುಮಾರ್
ಬೆಂಗಳೂರು, ಅ.7: ಪ್ರತಿಯೊಬ್ಬರೂ ಮೌಲ್ಯಾಧಾರಿತ ಜೀವನ ನಡೆಸಿದಾಗ ಮಾತ್ರ ಹದಗೆಡುತ್ತಿರುವ ಸಮಾಜ ಸುಧಾರಿಸಲು ಸಾಧ್ಯವಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಎನ್.ಆರ್.ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಬೆಂಗಳೂರು ಮಹಾನಗರ ಸಂಘಟನೆ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ-2018 ಹಾಗೂ ವಿಪ್ರ ಶಾಸಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಜಾತ್ಯತೀತವಾಗಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರವನ್ನು ನೀಡುತ್ತಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವ ಮೂಲಕ ಸಮಾಜದ ಅಭಿವೃದ್ಧಿಯಾಗಲಿ ಹಾಗೂ ಹದಗೆಡುತ್ತಿರುವ ಸಮಾಜ ಸರಿ ದಾರಿಗೆ ಬರಲಿ ಎಂದು ಹೇಳಿದರು.
ಇಂದಿನ ಯುವ ಜನಾಂಗವು ನಮ್ಮ ದೇಶದ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ನೀಡುವ ಕೆಲಸ ಮಾಡಬೇಕು. ಅಲ್ಲದೆ, ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿದಂತೆ ಸಾಹಿತ್ಯ, ಕಲೆ, ಸಂಗೀತ ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನೂ ಗುರುತಿಸಿ ಪುರಸ್ಕಾರಗಳನ್ನು ನೀಡಬೇಕೆಂದು ಕರೆ ನೀಡಿದರು.
ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಪೋಷಕರ ಅನುಭವ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಅವರ ಮಾರ್ಗ ದರ್ಶನದಲ್ಲಿ ನಡೆಯಬೇಕು. ಅಲ್ಲದೆ, ಈ ದೇಶದಲ್ಲಿ ಓದಿದ ಪ್ರತಿಭೆಗಳು ಕೆಲಸಕ್ಕಾಗಿ ವಿದೇಶಗಳಿಗೆ ಹೋದರೂ ಈ ಮಣ್ಣಿನ ಪರಂಪರೆಯನ್ನು ಮರೆಯಬಾರದು ಎಂದು ಹೇಳಿದರು.
ಪದ್ಮಶ್ರೀ ಪುರಸ್ಕೃತ ಡಾ.ವಿ.ಆರ್.ಗೌರಿಶಂಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಾಸಭಾಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ಶಾಸಕರಾದ ಬಿ.ಸಿ.ನಾಗೇಶ್, ವೇದವ್ಯಾ ಕಾಮತ್ ಉಪಸ್ಥಿತರಿದ್ದರು.







