ಉನ್ನತೀಕರಣ: ಸಾಮರ್ಥ್ಯ, ತೀವ್ರತೆ ಪಡೆದುಕೊಂಡ ಮಿಗ್-29 ಸಮರ ವಿಮಾನ

ಆದಮ್‌ಪುರ (ಪಂಜಾಬ್), ಅ. 7: ಇತ್ತೀಚೆಗಿನ ಉನ್ನತೀಕರಣದ ಬಳಿಕ ಸಮರ ವಿಮಾನ ಮಿಗ್-29 ಸಾಮರ್ಥ್ಯ ಹಾಗೂ ತೀವ್ರತೆ ಪಡೆದುಕೊಂಡಿದೆ. ಅತ್ಯಗತ್ಯದ ಸಮರ ವಿಮಾನಗಳ ಕೊರತೆಯಿರುವ ವಾಯು ಪಡೆಗೆ ಇದರಿಂದ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಶ್ಯ ಮೂಲದ ಈ ವಿಮಾನ ಈಗ ಆಕಾಶದಲ್ಲಿ ಇಂಧನ ತುಂಬಿಸಿಕೊಳ್ಳುವ, ಇತ್ತೀಚೆಗಿನ ಕ್ಷಿಪಣಿಗಳಿಗೆ ಹೊಂದಿಕೆಯಾಗುವ ಹಾಗೂ ಬಹು ಆಯಾಮದ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಆದಂಪುರ ವಾಯು ಪಡೆಯ ಸ್ಟೇಷನ್‌ನಲ್ಲಿ ನಿಯೋಜಿಸಲಾಗಿರುವ ಫ್ಲೈಟ್ ಲೆಫ್ಟಿನೆಂಟ್ ಕರಣ್ ಕೊಹ್ಲಿ ತಿಳಿಸಿದ್ದಾರೆ. ಆದಾಗ್ಯೂ ಈ ಹಿಂದಿನ ಪರಂಪರೆ ಆವೃತ್ತಿಯ ವಿಮಾನ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ವಾಯು ಪಡೆಯ ಮೇಲೆ ದಾಳಿ ನಡೆಸಿ ಭಾರತೀಯ ವಾಯು ಪಡೆಯ ಪ್ರಾಬಲ್ಯವನ್ನು ತೋರಿಸಿತ್ತು.
ಕಳೆದ ವಾರ ಆದಂಪುರ ವಾಯು ಪಡೆ ಸ್ಟೇಷನ್‌ನಲ್ಲಿ ಉನ್ನತೀಕರಿಸಿದ ಮಿಗ್-29 ಸಮರ ವಿಮಾನ ತನ್ನ ಸಮರ ಸಾಮರ್ಥ್ಯ ಪ್ರದರ್ಶಿಸಿತ್ತು. ದೇಶ ಸೋಮವಾರ ವಾಯು ಪಡೆ ದಿನಾಚರಣೆ ಆಚರಿಸಲಿದೆ. 1980ರ ಆರಂಭದಲ್ಲಿ ತುರ್ತು ಪರಿಸ್ಥಿತಿ ವಿಧಿ ಅಡಿಯಲ್ಲಿ ಖರೀದಿಸಲಾಗಿದ್ದ ಈ ಹಿಂದಿನ ಸಾಂಪ್ರದಾಯಿಕ ಆವೃತ್ತಿಯ ಮಿಗ್ 29 ಸಮರ ವಿಮಾನಕ್ಕೆ ಹೋಲಿಸಿದರೆ ಉನ್ನತೀಕರಿಸಿದ ಸಮರ ವಿಮಾನ ಸಮರ್ಥ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ. ಉನ್ನತೀಕರಿಸಿದ ಮಿಗ್-29 ವಿಮಾನ ಪೈಲೆಟ್‌ನ ಎದುರು ಇರುವ ಗ್ಲಾಸ್ ಸ್ಕ್ರೀನ್‌ನಲ್ಲಿ ಇತರ ವಿಮಾನಗಳ ವಿವರಗಳನ್ನು ನೀಡುವ ಮಲ್ಟಿ ಫಂಕ್ಷನಲ್ ಡಿಸ್ಲ್ಪೇ ಅಥವಾ ಎಂಎಫ್‌ಡಿ ಹೊಂದಿದೆ ಎಂದು ವಿಮಾನದ ಲೆಫ್ಫಿನೆಟ್ ಕೊಹ್ಲಿ ತಿಳಿಸಿದ್ದಾರೆ.
ವಾಯು ಪಡೆ ಸಮರ ವಿಮಾನಗಳ ಗಂಭೀರ ಕೊರತೆ ಎದುರಿಸುತ್ತಿದೆ ಎಂದು ಸೆಪ್ಟಂಬರ್ 12ರಂದು ಏರ್ ಮಾರ್ಷಲ್ ಬಿ.ಎಸ್. ಧಾನೋವ ಹೇಳಿದ್ದರು.







