ಚಿಕ್ಕಮಗಳೂರು: ಆರ್ ಟಿ ಒ ಕಚೇರಿಯಲ್ಲಿ ಮೂಲ ಕಡತಗಳಿಲ್ಲದೇ ಪರದಾಟ; ಆರೋಪ

ಮೂಡಿಗೆರೆ, ಅ.7: ಚಿಕ್ಕಮಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ವಾಹನಗಳ ಮೂಲ ಕಡತಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳದೇ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಪ್ರಸನ್ನ ಕುಮಾರ್ ಮತ್ತು ನಯನ ತಳವಾರ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕರು ತಮ್ಮ ಮಾಲೀಕತ್ವ ವರ್ಗಾವಣೆ, ತಿರುವಳಿ ಪತ್ರ ಸೇರಿದಂತೆ ವಿವಿಧ ಕೆಲಸಗಳಿಗೆ ಹಾಗೂ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದರೆ ಮೂಲ ಕಡತಗಳು ಇಲ್ಲವೆಂದು ತಿಂಗಳುಗಟ್ಟಲೆ ಸತಾಯಿಸುತ್ತಾರೆ. ಇದಕ್ಕೆ ಆರ್ ಟಿಒ ಕಚೇರಿಯಲ್ಲಿ ಮೂಲ ದಾಖಲೆಗಳ ಕೊಠಡಿ ನಿರ್ವಹಣೆ ಸರಿಯಿಲ್ಲದಿರುವುದೇ ಮುಖ್ಯ ಕಾರಣವಾಗಿದೆ ಎಂದು ದೂರಿದ್ದಾರೆ.
ಆರ್ ಟಿ ಒ ಕಚೇರಿಯಲ್ಲಿ ಅಭಿಲೇಖಾಲಯದ ಕೊಠಡಿ ಕಸದ ತೊಟ್ಟಿಯಂತಾಗಿದೆ. ಹಳೆಯ ದಾಖಲೆಗಳೆಲ್ಲಾ ಹರಿದು ಹೋಗಿದೆ. ನಿರ್ವಹಣೆ ಇಲ್ಲದೇ ಇರುವುದರಿಂದ ಇಲಿ, ಹೆಗ್ಗಣಗಳ ವಾಸ ತಾಣವಾಗಿದೆ. ಹಾಗಾಗಿ ಇಲ್ಲಿ ಯಾವ ದಾಖಲೆಗಳನ್ನು ಕೇಳಿದರೆ, ನೀಡದೇ ಸತಾಯಿಸಲಾಗುತ್ತಿದೆ. ಕಂತು ಕರಾರು ಒಪ್ಪಂದ ನಮೂದಿಸಿಕೊಂಡು ಸಾಲ ಪಡೆಯಲು ಹಾಗೂ ತಿರುವಳಿ ಪತ್ರ ಪಡೆಯಲು ಆರ್‍ಟಿಒ ಕಚೇರಿಯಲ್ಲಿ ಸಾರ್ವಜನಿಕರು ಹೆಚ್ಚಾಗಿ ತೆರಳುತ್ತಾರೆ. ಆದರೆ ಕೆಲಸವಾಗದೇ ವಾಪಾಸಾಗುವ ಪ್ರಸಂಗವೇ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾನು ಇತ್ತೀಚೆಗೆ ಬಂದಿದ್ದು, ಹಾಗಾಗಿ ಇಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದಿರಲಿಲ್ಲ. ರೆಕಾರ್ಡ್ ಕೊಠಡಿ ನಿರ್ವಹಣೆ ಮಾಡುವ ನೌಕರರಿಗೆ ಈಗಾಗಲೇ ನೋಟೀಸು ನೀಡಿದ್ದೇನೆ. ದಾಖಲೆ ಸಿಗದಿದ್ದರೆ ಅವರೇ ಜವಾಬ್ದಾರರಾಗುತ್ತಾರೆ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು.
-ಮುರುಗೇಂದ್ರ, ಆರ್ ಟಿ ಒ ಅಧಿಕಾರಿ, ಚಿಕ್ಕಮಗಳೂರು.
****







