ಸೌಹಾರ್ದತೆಯ ಬದುಕು ರೂಪಿಸಿಕೊಳ್ಳುವ ಆವಶ್ಯಕತೆಯಿದೆ: ಮುಹಮ್ಮದ್ ಕೋಯ ತಂಙಳ್

ಮೂಡಿಗೆರೆ, ಅ.7: ಎಲ್ಲಾ ಧರ್ಮಗಳು ತಮ್ಮದೇ ಆದ ಆಚಾರ, ವಿಚಾರಗಳಿಂದ ಸಮಾಜ ಕಟ್ಟುವ ಹಾಗೂ ಪರಸ್ಪರ ಸೌಹಾರ್ಧತೆಯಿಂದ ಬದುಕು ರೂಪಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಕೇರಳದ ಮಲಪ್ಪುರಂ ಜಿಲ್ಲೆಯ ಧಾರ್ಮಿಕ ವಿದ್ವಾಂಸ ಶೈಖುನಾ ಮುಹಮ್ಮದ್ ಕೋಯ ತಂಙಳ್ ಅಭಿಪ್ರಾಯಪಟ್ಟರು
ಅವರು ಪಟ್ಟಣದ ಹೊರ ವಲಯದ ಅರಳಿಗಂಡಿ ಮೊಯಿದ್ದೀನ್ ಜುಮ್ಮಾ ಮಸೀದಿಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮದರಸಗಳು ಮಕ್ಕಳನ್ನು ಧಾರ್ಮಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲದು. ಮಸೀದಿಗಳು ನಮಾಜ್ ಸಹಿತ ಇತರೇ ಧಾರ್ಮಿಕ ಕಾರ್ಯದ ಮೂಲಕ ಜಗತ್ತನ್ನೇ ಬೆಳಗಲು ಮುಸ್ಲಿಂಮರಿಗೆ ಕಲಿಸಿಕೊಡಬಲ್ಲದು. ಅಲ್ಲದೆ ಎಲ್ಲಾ ವರ್ಗವು ಒಂದಾಗುವ ಗುಣವನ್ನು ಕಲಿಸಿಕೊಟ್ಟು, ಸಮಾಜದಲ್ಲಿ ಸಂಸ್ಕೃತಿ, ಪರಂಪರೆಗೆ ಒತ್ತು ಕೊಡಬಲ್ಲದು ಎಂದು ಹೇಳಿದರು.
ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಯಾಕೂಬ್ ದಾರಿಮಿ ಮಾತನಾಡಿ, ಮಸೀದಿಯಲ್ಲಿ ಪ್ರತಿ ತಿಂಗಳು ಸ್ವಲಾತ್ ಎಂಬ ಧಾರ್ಮಿಕ ಕಾರ್ಯಕ್ರಮ ವರ್ಷಕ್ಕೊಮ್ಮೆ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ. ಇಂತಹ ಕಾರ್ಯಕ್ರಮದಿಂದ ಮಾನವ ಎಲ್ಲಾ ಜಂಜಾಟಗಳಿಗೂ ತೆರೆ ಎಳೆದು ಉತ್ತಮ ಮಾರ್ಗದಲ್ಲಿ ಸಾಗಿ, ಧಾರ್ಮಿಕ ವಿಧಿಗಳತ್ತ ತೆರಳುವುದು ಸಾಂಪ್ರಾದಾಯಕವಾಗಿದೆ ಎಂದು ಹೇಳಿದರು.
ಅರಳಿಗಂಡಿ ಮಸೀದಿ ಖತೀಬ್ ಸುಲೈಮಾನ್ ಆದಿಮಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಳಿಗಂಡಿ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ.ಮೊಹಿದ್ದೀನ್ ವಹಿಸಿದ್ದರು.
ಬದ್ರಿಯ ಮಸೀದಿ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಮುಖಂಡರಾದ ಸಿ.ಎಚ್.ಮಹಮ್ಮದ್ ರಿಯಾಝ್, ಎಚ್.ಹಸೆನಬ್ಬ ಹಾಜಿ, ಮಹಮ್ಮದ್ ಹಾಜಿ, ಅಬೂಬಕರ್, ಸೈಯದ್ ಜಮಾಲ್, ಅಲಿಯಬ್ ಹಾಜಿ, ಅಬ್ದುಲ್ ರೆಹಮಾನ್ ಮತ್ತಿತರರು ಉಪಸ್ಥಿತರಿದ್ದರು.







