ಸುಲ್ತಾನ್ ಜೊಹೊರ್ ಕಪ್: ಭಾರತದ ಜೂ. ಹಾಕಿ ತಂಡಕ್ಕೆ ಸತತ ಎರಡನೇ ಜಯ

ಜೊಹೊರ್ ಬಹ್ರು, ಅ.7: ಭಾರತದ ಜೂನಿಯರ್ ಪುರುಷರ ಹಾಕಿ ತಂಡ 8ನೇ ಆವೃತ್ತಿಯ ಸುಲ್ತಾನ್ ಆಫ್ ಜೊಹೊರ್ ಕಪ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ರವಿವಾರ ನಡೆದ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲೆಂಡ್ ತಂಡವನ್ನು 7-1 ಅಂತರದಿಂದ ಹೀನಾಯವಾಗಿ ಸೋಲಿಸಿತು. ಟೂರ್ನಮೆಂಟ್‌ನ ಮೊದಲ ದಿನವಾದ ಶನಿವಾರ ಭಾರತ ತಂಡ ಆತಿಥೇಯ ಮಲೇಷ್ಯಾ ವಿರುದ್ಧ 2-1 ಅಂತರದಿಂದ ರೋಚಕ ಜಯ ಸಾಧಿಸಿ ಶುಭಾರಂಭ ಮಾಡಿತ್ತು.
ಪ್ರಭ್ಜೋತ್ ಸಿಂಗ್(6ನೇ ನಿಮಿಷ), ಶೀಲಾನಂದ ಲಾಕ್ರಾ(15ನೇ, 43ನೇ ನಿಮಿಷ), ಹರ್ಮನ್‌ಜಿತ್ ಸಿಂಗ್(21ನೇ ನಿಮಿಷ), ಮುಹಮ್ಮದ್ ಫರಾಝ್(23ನೇ ನಿಮಿಷ), ಅಭಿಷೇಕ್ (50ನೇ ನಿಮಿಷ) ಹಾಗೂ ನಾಯಕ ಮನ್‌ದೀಪ್ ಮೊರ್(60ನೇ ನಿಮಿಷ) ಭಾರತದ ಗೆಲುವಿಗೆ ನೆರವಾದರು.
ನ್ಯೂಝಿಲೆಂಡ್ ಪರ 53ನೇ ನಿಮಿಷದಲ್ಲಿ ಸ್ಯಾಮ್ ಹಿಹಾ ಸಮಾಧಾನಕರ ಗೋಲು ಬಾರಿಸಿದರು.
ಕಳೆದ ವರ್ಷ ಕಂಚಿನ ಪದಕ ಜಯಿಸಿದ್ದ ಭಾರತ ಆರನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸುವುದರೊಂದಿಗೆ ಉತ್ತಮ ಆರಂಭ ಪಡೆದಿತ್ತು. ಈ ವರ್ಷಾರಂಭದಲ್ಲಿ ಮಲೇಶ್ಯಾದಲ್ಲಿ ನಡೆದ ಸುಲ್ತಾನ್ ಅಝ್ಲಾನ್ ಶಾ ಹಾಕಿಯಲ್ಲಿ ಹಿರಿಯರ ತಂಡದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಶೀಲಾನಂದ ಲಾಕ್ರಾ ಅವಳಿ ಗೋಲು ಬಾರಿಸಿ ಗಮನ ಸೆಳೆದರು.
ನ್ಯೂಝಿಲೆಂಡ್ ಆರಂಭಿಕ ಹಿನ್ನಡೆಯಿಂದ ಚೇತರಿ ಸಿಕೊಳ್ಳಲು ಯತ್ನಿಸಿತು. ಆದರೆ, ಭಾರತದ ರಕ್ಷಣಾ ವಿಭಾಗಇದಕ್ಕೆ ಅವಕಾಶ ನೀಡಲಿಲ್ಲ. ಭಾರತದ ಗೋಲ್‌ಕೀಪರ್‌ಪಂಕಜ್ ರಜಕ್ ನ್ಯೂಝಿಲೆಂಡ್‌ಗೆ ಹಲವು ಗೋಲು ಗಳನ್ನು ನಿರಾಕರಿಸಿ ಉತ್ತಮ ಪ್ರದರ್ಶನ ನೀಡಿದರು.
ಭಾರತದ ಫಾರ್ವರ್ಡ್‌ಗಳು 21ನೇ ಹಾಗೂ 23ನೇ ನಿಮಿಷದಲ್ಲಿ ಬೆನ್ನುಬೆನ್ನಿಗೆ ಗೋಲು ದಾಖಲಿಸಿ ನ್ಯೂಝಿಲೆಂಡ್‌ಗೆ ಒತ್ತಡ ಹೇರಿದರು. 21ನೇ ನಿಮಿಷದಲ್ಲಿ ಹರ್ಮನ್‌ಜಿತ್ ಫೀಲ್ಡ್ ಸ್ಟ್ರೈಕ್‌ನಿಂದ ಗೋಲು ಬಾರಿಸಿದರು. ಮುಹಮ್ಮದ್ ಫರಾಝ್ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳ ಆಟದ ವೇಗ ಸ್ವಲ್ಪ ಕಡಿಮೆಯಾಗಿತ್ತು. 43ನೇ ನಿಮಿಷದಲ್ಲಿ ಲಾಕ್ರಾ ಮತ್ತೊಂದು ಗೋಲು ಬಾರಿಸಿದರು. 50ನೇ ನಿಮಿಷದಲ್ಲಿ ಗೋಲು ಬಾರಿಸಿದ ಅಭಿಷೇಕ್ ಭಾರತಕ್ಕೆ 6-0 ಮುನ್ನಡೆ ಒದಗಿಸಿಕೊಟ್ಟರು. 3 ನಿಮಿಷದ ಬಳಿಕ ನ್ಯೂಝಿಲೆಂಡ್‌ನ ಸ್ಯಾಮ್ ಸಮಾಧಾನಕರ ಗೋಲು ಬಾರಿಸಿದರು.
ನಾಯಕ ಮನ್‌ದೀಪ್ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಶೀಟ್‌ನಲ್ಲಿ ತನ್ನ ಹೆಸರನ್ನು ಸೇರಿಸಿದರು. ಈ ಮೂಲಕ ತನ್ನ ತಂಡಕ್ಕೆ ಭಾರೀ ಅಂತರದ ಗೆಲುವಿಗೆ ನೆರವಾದರು.
ಭಾರತ ಅ.9 ರಂದು ಆಡಲಿರುವ ತನ್ನ ಮೂರನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.







