ಯೂತ್ ಒಲಿಂಪಿಕ್ ಗೇಮ್ಸ್ ಗೆ ಅದ್ದೂರಿ ಚಾಲನೆ

ಬ್ಯುನಸ್ ಐರಿಸ್, ಅ.7: ಮುಂದಿನ 12 ದಿನಗಳ ಕಾಲ ನಡೆಯುವ ಯೂತ್ ಒಲಿಂಪಿಕ್ ಗೇಮ್ಸ್‌ಗೆ ರವಿವಾರ ಚಾಲನೆ ನೀಡಲಾಗಿದ್ದು 32 ಕ್ರೀಡೆಗಳ 240ಕ್ಕೂ ಅಧಿಕ ಸ್ಪರ್ಧೆಗಳಲ್ಲಿ 4,000 ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಆಧುನಿಕ ಯೂತ್ ಒಲಿಂಪಿಕ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಉದ್ಘಾಟನಾ ಸಮಾರಂಭವು ಸ್ಟೇಡಿಯಂನೊಳಗೆ ನಡೆಯದೇ ನಗರದ ಬೀದಿಯಲ್ಲಿ ವರ್ಣರಂಜಿತವಾಗಿ ನಡೆಯಿತು. ಈ ಸಮಾರಂಭಕ್ಕೆ 2 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಸಾಕ್ಷಿಯಾಗಿದ್ದಾರೆ. ಶೂಟರ್ ಮನು ಭಾಕರ್ ಧ್ವಜಧಾರಿಯಾಗಿ ಭಾರತದ ಅಥ್ಲೀಟ್‌ಗಳ ತಂಡವನ್ನು ಮುನ್ನಡೆಸಿದರು.
ಉದ್ಘಾಟನೆಯ ಸಂಕೇತವಾಗಿ ಬ್ಯುನಸ್ ಐರಿಸ್‌ನ ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ ಮೂಡಿತು. ಜೂನ್‌ನಲ್ಲಿ ಥಾಯ್ಲೆಂಡ್‌ನ ನೆರೆಪೀಡಿತ ಗುಹೆಯೊಳಗೆ ಎರಡು ವಾರಗಳ ಕಾಲ ಸಿಲುಕಿಕೊಂಡು ಜೀವಂತವಾಗಿ ಹೊರಬಂದು ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದ ‘ವೈರ್ಲ್ಡ್ ಬೋರ್ಸ್’ ಫುಟ್ಬಾಲ್ ತಂಡದ ಸದಸ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್, ‘ವೈರ್ಲ್ಡ್ ಬೋರ್ಸ್’ ತಂಡದ ಶಕ್ತಿ ಹಾಗೂ ಸಂಕಷ್ಟದಿಂದ ಬೇಗನೇ ಚೇತರಿಸಿಕೊಂಡ ಸಾಮರ್ಥ್ಯವನ್ನು ಶ್ಲಾಘಿಸಿದರು.
‘‘1978ರ ವಿಶ್ವಕಪ್‌ನ ಬಳಿಕ ಇದು ಅರ್ಜೆಂಟೀನದ ಪಾಲಿಗೆ ಅತ್ಯಂತ ಪ್ರಮುಖ ಕ್ರೀಡಾಕೂಟವಾಗಿದೆ’’ ಎಂದು ಅರ್ಜೆಂಟೀನ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಗೆರಾರ್ಡೊ ವರ್ಥೆನ್ ಹೇಳಿದ್ದಾರೆ.
15 ರಿಂದ 18ರ ವಯೋಮಾನದವರಿಗೆ ಬ್ಯುನಸ್‌ಐರಿಸ್‌ನಲ್ಲಿ ನಡೆಯುವ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸುವ ಅವಕಾಶವಿದ್ದು 206 ತಂಡಗಳು ಭಾಗವಹಿಸಲಿವೆ.
ಭಾರತದ 46 ಅಥ್ಲೀಟ್‌ಗಳ ಸಹಿತ 68 ಸದಸ್ಯರುಗಳನ್ನೊಳಗೊಂಡ ನಿಯೋಗ ಗೇಮ್ಸ್‌ನಲ್ಲಿ ಭಾಗವಹಿಸಲು ಆಗಮಿಸಿದೆ. ಭಾರತ ಪ್ರತಿಷ್ಠಿತ ಟೂರ್ನಿಯಲ್ಲಿ 13 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ.
ಈ ಬಾರಿ ಯೂತ್ ಒಲಿಂಪಿಕ್ಸ್‌ಗೆ ಭಾರತ ಗರಿಷ್ಠ ಸಂಖ್ಯೆಯ ಅಥ್ಲೀಟ್‌ಗಳನ್ನು ಕಳುಹಿಸಿಕೊಟ್ಟಿದೆ. ಹಾಕಿಯಲ್ಲಿ 18 ಮಂದಿ(ಪುರುಷರ ಹಾಗೂ ಮಹಿಳಾ ತಂಡದಲ್ಲಿ ತಲಾ 9)ಭಾಗವಹಿಸುತ್ತಿದ್ದಾರೆ. ಟ್ರಾಕ್ ಆ್ಯಂಡ್ ಫೀಲ್ಡ್‌ನಲ್ಲಿ 7 ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ.
►ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತದ ಇತರ ಸ್ಪರ್ಧಿಗಳು: ಶೂಟಿಂಗ್(4), ರಿಕರ್ವ್ ಆರ್ಚರಿ(2), ಬ್ಯಾಡ್ಮಿಂಟನ್(2), ಸ್ವಿಮ್ಮಿಂಗ್(2), ಟೇಬಲ್ ಟೆನಿಸ್(2), ವೇಟ್‌ಲಿಫ್ಟಿಂಗ್(2),ಕುಸ್ತಿ(2), ರೋವಿಂಗ್(2), ಬಾಕ್ಸಿಂಗ್(1), ಜುಡೋ(1), ಸ್ಪೋರ್ಟ್ ಕ್ಲೈಬಿಂಗ್(1).
ಕಾಮನ್‌ವೆಲ್ತ್ ಗೇಮ್ಸ್ ಹಾಗೂ ವಿಶ್ವಕಪ್‌ನಲ್ಲಿ 10 ಮೀ. ಏರ್ ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಜಯಿಸಿರುವ 16ರ ಹರೆಯದ ಭಾಕರ್ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್.







