ಮಣಿಪುರ ಉಪಕುಲಪತಿ ಹೇಳಿಕೆ ದುರದೃಷ್ಟಕರ: ರಾಜ್ಯಪಾಲ
ಇಂಪಾಲಾ,ಅ.8: ಇತ್ತೀಚೆಗೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರತಿಭಟನೆಯ ವೇಳೆ ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಪ್ರತಿಭಟನಾಕಾರರನ್ನು ಬೆಂಬಲಿಸಿದ್ದಾರೆ ಎಂದು ಮಣಿಪುರ ವಿಶ್ವವಿದ್ಯಾನಿಲಯದ ಪ್ರಬಾರ ಉಪಕುಲಪತಿ ಹೇಳಿರುವ ನೀಡಿಕೆ ದುರದೃಷ್ಟಕರ ಎಂದು ರಾಜ ಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರೊ.ಕೆ. ಯೋಗಿಂದ್ರೊಗೆ ಶನಿವಾರ ರಾಜ ಭವನದ ಅಧಿಕಾರಿಗಳು ಕಳುಹಿಸಿದ ಪತ್ರದಲ್ಲಿ, ಅಕ್ಟೋಬರ್ 3ರಂದು ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಬರೆದಿರುವ ಪತ್ರವು ಅವಹೇಳನ ಮತ್ತು ಪ್ರೊಟೊಕಾಲ್‌ನ ಅವಗಣನೆಗೆ ಸಮವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾಜ್ಯಪಾಲರು ನಿಮ್ಮ ಮಾತುಗಳಿಂದ ಚಕಿತರಾಗಿದ್ದಾರೆ. ನಿಮ್ಮ ಮಾತುಗಳು ತಪ್ಪು ಸಂದೇಶವನ್ನು ರವಾನಿಸುತ್ತದೆ. ಕ್ಯಾಂಪಸ್‌ನಲ್ಲಿ ನಡೆದ ಘಟನೆಯ ಬಗ್ಗೆ ಮತ್ತು ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಅದು ಬೀರುವ ಪರಿಣಾಮದ ಕುರಿತು ರಾಜ್ಯಪಾಲರು ಚಿಂತಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾಲಯವನ್ನು ಉಗ್ರರಂಥ ಪ್ರತಿಭಟನಾಕಾರರಿಂದ ರಕ್ಷಿಸಲು ಕೇಂದ್ರ ತುರ್ತು ಕ್ರಮ ಕೈಗೊಳ್ಳಬೇಕೆಂದು ಕೋರಿ ಪ್ರೊ.ಯೋಗಿಂದ್ರೊ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದ್ದರು.





