ಲೋಕಸಭಾ ಉಪ ಚುನಾವಣೆ ತಡೆಯಲು ಸಾಧ್ಯವಿದೆ: ಹಿರಿಯ ವಕೀಲ ಬಿ.ವಿ.ಆಚಾರ್ಯ

ಬೆಂಗಳೂರು, ಅ.8: ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯನ್ನು ತಡೆಯಲು ಸಾಧ್ಯವಿದೆ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣೆಗೆ 5 ತಿಂಗಳ ಮಾತ್ರ ಬಾಕಿ ಉಳಿದಿರುವ ವೇಳೆ ಉಪಚುನಾವಣೆ ಘೋಷಣೆಯಾಗಿದೆ. ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 151 ಎ ಅಡಿಯಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿ ಇದ್ದರೆ ಚುನಾವಣೆ ನಡೆಸಬೇಕೆಂದಿಲ್ಲ. ಚುನಾವಣೆಯನ್ನು ತಡೆಯಲು ಅವಕಾಶವಿದ್ದು, ಎಲ್ಲ ಪಕ್ಷಗಳು ಒಟ್ಟಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಬೇಕಾಗಿದೆ. ಆಗ ಆಯೋಗ ತನ್ನ ಕ್ರಮದ ಕುರಿತು ವಿಮರ್ಶೆ ಮಾಡಿಕೊಳ್ಳಬಹುದು ಎಂದಿದ್ದಾರೆ. ಚುನಾವಣೆ ಮಾಡಬಾರದಂದೇನಿಲ್ಲ, ಆಯೋಗದ ಕ್ರಮವನ್ನು ಈಗ ಕೋರ್ಟ್‌ನಲ್ಲಿ ಪ್ರಶ್ನಿಸುವುದು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈಗಾಗಲೇ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದು, ಒಲ್ಲದ ಮನಸ್ಸಿನಿಂದ ಚುನಾವಣೆ ಎದುರಿಸುತ್ತಿವೆ.





