ಫೇಸ್ ಬುಕ್ ನಲ್ಲಿ ಸಚಿವ ಯು.ಟಿ. ಖಾದರ್ ಮಾನಹಾನಿ: ದೂರು
ಮಂಗಳೂರು, ಅ. 8: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕುರಿತು ಫೇಸ್ ಬುಕ್ ನಲ್ಲಿ ಮಾನಹಾನಿಗೈದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ.
'ಹನಿ ಹಿಂದೂಸ್ತಾನಿ ಮಂಗಳೂರು ಹಿಂದು' ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಸಚಿವ ಯು.ಟಿ.ಖಾದರ್ ಅವರನ್ನು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿ, ಸಚಿವರ ಮಾನಹಾನಿಗೈಯ್ಯಲಾಗಿದೆಯೆಂದು ಆರೋಪಿಸಿ ಯು.ಟಿ.ಖಾದರ್ ಅಭಿಮಾನಿ ಬಳಗದ ಸದಸ್ಯರಾದ ಅಶ್ರಫ್ ಮೋನು ಬೋಳಿಯಾರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಪ್ರಸ್ತುತ ಫೇಸ್ ಬುಕ್ ಖಾತೆಯಲ್ಲಿ ಸಚಿವ ಯು.ಟಿ.ಖಾದರ್ ಅವರ ಭಾವಚಿತ್ರಗಳನ್ನು ವಿರೂಪಗೊಳಿಸಿ, ಅವಾಚ್ಯ ಪದಗಳನ್ನು ಬಳಸಿ ಮಾನಹಾನಿಕರ ವರದಿಗಳನ್ನು ಪ್ರಸರಿಸಿದ್ದು ಲಕ್ಷಾಂತರ ಯು.ಟಿ. ಅಭಿಮಾನಿಗಳಿಗೆ ನೋವುಂಟು ಮಾಡಿದೆ ಮಾತ್ರವಲ್ಲ ಪ್ರಸ್ತುತ ಪೇಸ್ ಬುಕ್ ಖಾತೆಯಲ್ಲಿ ಕೋಮು ದ್ವೇಷವನ್ನುಂಟು ಮಾಡುವ ಪೋಸ್ಟ್ ಗಳನ್ನೂ ಹಾಕಲಾಗಿದ್ದು, ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಅಶ್ರಫ್ ಮೋನು ಜೊತೆ ರಮೇಶ್ ಶೆಟ್ಟಿ ಬೋಳಿಯಾರು, ಇಸ್ಮಾಯಿಲ್ ಕರ್ವೇಲು, ಲತೀಫ್ ಮೈಕಾಲ ಮುಂತಾದವರು ಉಪಸ್ಥಿತರಿದ್ದರು.







