ವಿಶ್ವವಿಖ್ಯಾತ ದಸರಾ ಬಹಿಷ್ಕರಿಸಲು ಮೈಸೂರು ಕಾಂಗ್ರೆಸ್ಸಿಗರ ನಿರ್ಧಾರ: ಸಚಿವರು, ಶಾಸಕರು ಪಾಲ್ಗೊಳ್ಳದಂತೆ ಮನವಿ

ಸಾಂದರ್ಭಿಕ ಚಿತ್ರ
ಮೈಸೂರು,ಅ.8: ವಿಶ್ವವಿಖ್ಯಾತ ಮೈಸೂರು ದಸರಾವನ್ನು ಬಹಿಷ್ಕರಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ನಾಡಹಬ್ಬ ಎಂದರೆ ಎಲ್ಲರನ್ನೂ ಒಳಗೊಂಡು ಆಚರಿಸಬೇಕು. ಆದರೆ ಈ ಬಾರಿಯ ದಸರಾ ಆಚರಣೆ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಅವರ ದರ್ಬಾರ್ ದಸರಾ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಸರಾ ಆಚರಣೆಗೆ ಮೈಸೂರು ನಗರದ ಪ್ರಮುಖರು, ಪಕ್ಷಗಳ ಕಾರ್ಯಕರ್ತರುಗಳು ಮತ್ತು ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಚರಿಸಬೇಕಿತ್ತು. ಆದರೆ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಅಣತಿಯಂತೆ ದಸರಾ ಆಚರಣೆಯಾಗುತ್ತಿದೆ ಎಂದು ಹೇಳಿದರು.
ದಸರಾದಲ್ಲಿ 16 ಉಪಸಮಿತಿಗಳು ಇದ್ದು, ಪ್ರತಿಯೊಂದು ಉಪಸಮಿತಿಗಳಿಗೆ ಪಕ್ಷಗಳ ಕಾರ್ಯಕರ್ತರನ್ನೊಳಗೊಂಡ ಸಾರ್ವಜನಿಕರನ್ನು ಆಯ್ಕೆಮಾಡಿಕೊಳ್ಳಬೇಕಿತ್ತು. ಪಕ್ಷಕ್ಕಾಗಿ ಕಾರ್ಯಕರ್ತರು ದುಡಿದಿದ್ದಾರೆ. ಅವರನ್ನು ಇಂತಹ ಸಂದರ್ಭದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕಿರುವುದು ನಮ್ಮ ಕರ್ತವ್ಯ. ಅಂತಹದರಲ್ಲಿ ಇದುವರೆಗೂ ಯಾವುದೇ ಉಪಸಮಿತಿಗೂ ನೇಮಕ ಮಾಡಿಕೊಳ್ಳದಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ. ಕಾರ್ಯಕರ್ತರ ನೋವನ್ನು ನಮ್ಮ ಮುಖಂಡರುಗಳಿಗೆ ತಿಳಿಸಲಾಗುವುದು. ಅಲ್ಲದೇ ದಸರಾದಲ್ಲಿ ಪಾಲ್ಗೊಳ್ಳದಿರಲು ನಮ್ಮ ಪಕ್ಷದ ನಾಯಕರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ದಸರಾ ಆರಂಭದಿಂದಲೂ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ. ದಸರಾ ಸಮಿತಿ ಸಭೆಯಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರು ಕಾಂಗ್ರೆಸ್ ಪಕ್ಷದವರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮೈಸೂರು ನಗರದ ಶಾಸಕ ತನ್ವೀರ್ ಸೇಠ್ ಸಹ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಆದರೂ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಎಚ್ಚೆತ್ತುಕೊಳ್ಳದೆ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವರಾದ ಜಿ.ಟಿ.ಡಿ ಮತ್ತು ಮಹೇಶ್ ಕೂಡ ಕಾರ್ಯಕರ್ತರಾಗಿ ದುಡಿದಿರುವವರು. ಅವರಿಗೂ ಕಾರ್ಯಕರ್ತರ ಸಂಕಟ ಏನು ಎಂಬುವುದು ಗೊತ್ತಿದೆ. ಹಾಗಿದ್ದರೂ ದಸರಾ ಉಪಸಮಿತಿಗೆ ಏಕೆ ಸದಸ್ಯರನ್ನು ನೇಮಕ ಮಾಡಿಲ್ಲ ಎಂಬುವುದು ಆಶ್ಚರ್ಯವುಂಟು ಮಾಡಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ದಸರಾ ಹೈಪವರ್ ಕಮಿಟಿ ಸಭೆ ನಡೆದು ಎರಡು ತಿಂಗಳಾಗಿದೆ. ಅಲ್ಲಿ ಉಪಸಮಿತಿಗಳಿಗೆ ಶೀಘ್ರದಲ್ಲಿಯೇ ನೇಮಕ ಮಾಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೂ ಇಬ್ಬರು ಸಚಿವರು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಹೇಳಿದರು.
ದಸರಾ ಆಚರಣೆಗೆ ನಮ್ಮ ಅಡ್ಡಿಯಿಲ್ಲ. ಇದೊಂದು ನಾಡ ಹಬ್ಬ. ಎಲ್ಲರೂ ಸಂಭ್ರಮಪಡಬೇಕು. ಆದರೆ ದಸರಾ ಆಚರಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಪಾಲ್ಗೊಳ್ಳದಂತೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಮರ್ಯಾದೆ ಇಲ್ಲದ ಜಾಗಕ್ಕೆ ಹೋದರೆ ನಮಗೆ ಅವಮಾನ. ಅದಕ್ಕಾಗಿ ನಮ್ಮ ಪಕ್ಷದ ಜನಪ್ರತಿನಿಧಿಗಳು ಮತ್ತು ನಾಯಕರು ದಸರಾ ಆಚರಣೆಯಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಿದ್ದೇವೆ.
-ಎನ್.ಭಾಸ್ಕರ್, ಕೆಪಿಸಿಸಿ ಸದಸ್ಯ







