ಸ್ವಯಂ ಶ್ಲಾಘನೆ ಮಾಡಿಕೊಂಡು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಅಖ್ತರ್

ಕರಾಚಿ, ಅ.8: ಪಾಕಿಸ್ತಾನದ ಮಾಜಿ ಆಟಗಾರ ಶುಐಬ್ ಅಖ್ತರ್ ವಿಶ್ವ ಕ್ರಿಕೆಟ್‌ನ ಅತ್ಯಂತ ವೇಗದ ಬೌಲರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಸಾಮಾಜಿಕ ಜಾಲತಾಣದಲ್ಲಿ ‘ತನ್ನನ್ನು ತಾನೇ ಕ್ರಿಕೆಟ್‌ನ ಡಾನ್’ ಎಂದು ಶ್ಲಾಘಿಸಿಕೊಂಡು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಅಖ್ತರ್ ಟ್ವೀಟ್‌ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಅಭಿಮಾನಿಗಳು, 2003ರ ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರುದ್ಧ ಚೆನ್ನಾಗಿ ದಂಡಿಸಿಕೊಂಡಿರುವುದನ್ನು ನೆನಪಿಸಿದ್ದಾರೆ. ಆ ಪಂದ್ಯದಲ್ಲಿ ತೆಂಡುಲ್ಕರ್ ಕೇವಲ 75 ಎಸೆತಗಳಲ್ಲಿ 98 ರನ್ ಗಳಿಸಿದ್ದರು.
‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಅಖ್ತರ್ 1997ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. 1998ರಲ್ಲಿ ಏಕದಿನ ಕ್ರಿಕೆಟಿಗೆ ಕಾಲಿಟ್ಟಿದ್ದರು. ಕ್ರಿಕೆಟ್ ಚರಿತ್ರೆಯಲ್ಲಿ ಅತ್ಯಂತ ವೇಗವಾಗಿ ಎಸೆತವೊಂದನ್ನು ಬೌಲಿಂಗ್ ಮಾಡಿದ ದಾಖಲೆ ಇನ್ನೂ ಅವರ ಹೆಸರಲ್ಲಿದೆ. ಅಖ್ತರ್ 2003ರ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಗಂಟೆಗೆ 161.3 ವೇಗದಲ್ಲಿ ಎಸೆತವನ್ನು ಎಸೆದ ಸಾಧನೆ ಮಾಡಿದ್ದರು.
ಅಖ್ತರ್ ಟೆಸ್ಟ್ ಕ್ರಿಕೆಟಿನಲ್ಲಿ 178 ವಿಕೆಟ್ ಕಬಳಿಸಿದ್ದು 11ಕ್ಕೆ 6 ವಿಕೆಟ್ ಶ್ರೇಷ್ಠ ಸಾಧನೆಯಾಗಿದೆ. ಏಕದಿನದಲ್ಲಿ 247 ವಿಕೆಟ್ ಪಡೆದಿರುವ ಅಖ್ತರ್, 20 ಟ್ವೆಂಟಿ-20ಯಲ್ಲಿ 19 ವಿಕೆಟ್ ಉರುಳಿಸಿದ್ದರು.







