ಮೊರಾರ್ಜಿ ದೇಸಾಯಿ ಶಾಲೆಗಳ ಗುಣಮಟ್ಟ ರಾಷ್ಟ್ರಕ್ಕೆ ಮಾದರಿ: ಅಲ್ಪಸಂಖ್ಯಾತ ನಿರ್ದೇಶನಾಲಯದ ನಿರ್ದೇಶಕ ಅಕ್ರಮ್ ಪಾಷ

ಬೆಂಗಳೂರು, ಅ.9: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಇಡೀ ರಾಷ್ಟ್ರಕ್ಕೆ ಮಾದರಿಯಾಗಿವೆ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಅಕ್ರಮ್ ಪಾಷ ತಿಳಿಸಿದರು.
ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಮಸ್ತೇನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಗಣಿತ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ನಮ್ಮ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರವು ಹೆಚ್ಚಿನ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಕಳೆದ ವರ್ಷ 120 ಕೋಟಿ ರೂ.ಗಳ ಅನುದಾನ ಒದಗಿಸಿದೆ. ನಮ್ಮ ರಾಜ್ಯದಲ್ಲಿರುವ 135 ವಸತಿ ಶಾಲೆಗಳಲ್ಲಿ 30 ಸಾವಿರ ಮಕ್ಕಳಿದ್ದಾರೆ. ಈ ಬಾರಿ ಮತ್ತೆ 35 ಶಾಲೆಗಳು ಹಾಗೂ 10 ಪಿಯು ಕಾಲೇಜು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಹಲವಾರು ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬರುತ್ತಿದೆ. ಆದರೆ, ಒಟ್ಟಾರೆ ಗಮನಿಸಿದಾಗ ಶೇ.98ರಷ್ಟು ಫಲಿತಾಂಶವಿದೆ. ಗಣಿತ ವಿಷಯದಲ್ಲಿ ಮಕ್ಕಳು ಅನುತೀರ್ಣರಾಗುತ್ತಿರುವುದರಿಂದ ಫಲಿತಾಂಶದ ಪ್ರಮಾಣ ಇಳಿಕೆಯಾಗಿದೆ. ಆದುದರಿಂದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಎಲ್ಲ ಮೊರಾರ್ಜಿ ದೇಸಾಯಿ ಶಾಲೆಗಳ ಗಣಿತ ಶಿಕ್ಷಕರಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಗಣಿತ ವಿಷಯವನ್ನು ಮಕ್ಕಳಿಗೆ ಸುಲಭವಾಗಿ ಯಾವ ರೀತಿ ಬೋಧಿಸಬಹುದು ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಗಳು, ಅತ್ಯಂತ ಸರಳ, ಸುಲಭ ವಿಧಾನಗಳನ್ನು ಶಿಕ್ಷಕರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡುವ ನಿಟ್ಟಿನಲ್ಲಿ ಶಿಕ್ಷಕರನ್ನು ಸಿದ್ಧಗೊಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಅಕ್ರಮ್ ಪಾಷ ತಿಳಿಸಿದರು.
ಕೇಂದ್ರದ ಪ್ರಶಸ್ತಿ: ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಈ ಶಾಲೆಯು 2017ನೆ ಸಾಲಿನಲ್ಲಿ ಕೇಂದ್ರ ಸರಕಾರದ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ’ವನ್ನು ತನ್ನದಾಗಿಸಿಕೊಂಡಿದೆ. ಶಾಲೆಯ ಆವರಣದಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾದ ವಸತಿ ಬ್ಲಾಕ್‌ಗಳು, ಭೋಜನಾಲಯ, ಬಯಲು ವ್ಯಾಯಾಮ ವಿಭಾಗ, ಸ್ಮಾರ್ಟ್ ಕ್ಲಾಸ್ ರೂಂಗಳು, ಸಭಾಂಗಣ, ಸಿಬ್ಬಂದಿಗಳ ವಸತಿ ಗೃಹಗಳು, ಬಹುಪಯೋಗಿ ಸಭಾಂಗಣ, ಆಟದ ಮೈದಾನ ಹೊಂದಿದೆ ಎಂದು ಅವರು ಹೇಳಿದರು.
ಈ ಶಾಲೆಯಲ್ಲಿ ಒಟ್ಟು 22 ಮಂದಿ ಸಿಬ್ಬಂದಿಯಿದ್ದಾರೆ. ಈ ಶಾಲೆಯನ್ನು ಸ್ಕೂಲ್ ಆಪ್ ಎಕ್ಸಲೆನ್ಸ್ ಎಂದು ಕರೆಯಲಾಗುತ್ತದೆ. ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದ ಅಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ, ಕೇಂದ್ರ ಸರಕಾರದ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿಗಳು ಬಂದು ಹೋಗಿದ್ದಾರೆ ಎಂದು ಅವರು ತಿಳಿಸಿದರು.
ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಪಠ್ಯ ಪುಸ್ತಕಗಳು, ಸಮವಸ್ತ್ರ, ಶೂ,ಸಾಕ್ಸ್, ಬೆಡ್‌ಶೀಟುಗಳು, ಶುಚಿ ಕಿಟ್ ಗಳು, 17 ವಸ್ತುಗಳು ಇರುವ ಸ್ಟೇಷನರಿ ಸೇರಿದಂತೆ ಎಲ್ಲವನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ಈ ಶಾಲೆಯಲ್ಲಿ 13 ಮಂದಿ ಬೋಧಕ ಸಿಬ್ಬಂದಿಯಿದ್ದಾರೆ. ಇವರನ್ನು ಕೆಪಿಎಸ್ಸಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಅಕ್ರಮ್ ಪಾಷ ಹೇಳಿದರು.
ಇದೇ ಶಾಲೆಯ ಆವರಣದಲ್ಲಿ ಹೆಣ್ಣು ಮಕ್ಕಳಿಗೆ ವಿಜ್ಞಾನ ಮತ್ತು ವಾಣಿಜ್ಯ ಕೋರ್ಸುಗಳು ಒಳಗೊಂಡ ಪಿಯು ಕಾಲೇಜು ಆರಂಭಿಸುತ್ತಿದ್ದೇವೆ. ರಾಜ್ಯದ ಶಿಕ್ಷಕರನ್ನು ಇಲ್ಲಿಗೆ ಕರೆಸಿ ಇಲ್ಲಿರುವ ಬಹುಪಯೋಗಿ ಸಭಾಂಗಣದಲ್ಲಿ ಆಗಿಂದಾಗ್ಗೆ ತರಬೇತಿ ನೀಡಲಾಗುತ್ತಿದೆ. ಇದನ್ನು ಸಂಪನ್ಮೂಲ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಇದೇ ರೀತಿ ಕಂದಾಯ ವಿಭಾಗವಾರು ಸಂಪನ್ಮೂಲ ಕೇಂದ್ರ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಈ ಹಿಂದೆ ಕೇವಲ 26 ಸಿಬ್ಬಂದಿ ಇದ್ದರು. ಈಗ ಸುಮಾರು 6 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಈ ಹಿಂದೆ ಕೇವಲ 12 ಕಾರ್ಯಕ್ರಮಗಳು ಮಾತ್ರ ಇದ್ದವು. ಈಗ 31 ಯೋಜನೆಗಳು ಪ್ರಗತಿಯಲ್ಲಿವೆ. ಅಲ್ಪಸಂಖ್ಯಾತರ ನಿರ್ದೇಶನಾಲಯವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅಕ್ರಮ್ ಪಾಷ ಹೇಳಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ನಜೀಬ್‌ಉಲ್ಲಾಖಾನ್, ಉಪ ನಿರ್ದೇಶಕಿ ಶೀರಿನ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಶೇಕ್ ಅಲಿ, ಶಾಲೆಯ ಪ್ರಾಂಶುಪಾಲ ಜಿ.ಮುರಳಿ ಉಪಸ್ಥಿತರಿದ್ದರು.







