ಮಾಯಾವತಿ ನಿರ್ದೇಶನದಂತೆ ಎನ್.ಮಹೇಶ್ ರಾಜೀನಾಮೆ ನೀಡಿರಬಹುದು: ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಅ.12: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ದೂರವಿರಲು ಪಕ್ಷದ ವರಿಷ್ಠೆ ಮಾಯಾವತಿ ನಿರ್ಧರಿಸಿದಂತೆ ಕಾಣುತ್ತದೆ. ಆದ್ದರಿಂದ ಎನ್.ಮಹೇಶ್ ರಾಜೀನಾಮೆ ನೀಡಿರುವ ಸಾಧ್ಯತೆಯಿದೆ ಹೊರತು ಮತ್ಯಾವುದೇ ಉದ್ದೇಶವಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೆಗೌಡ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಕಟ್ಟಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸ್ವತಃ ಎನ್ ಮಹೇಶ್ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಬೇರೆ ವಿಷಯವಿಲ್ಲ. ಮುಂದೆ ಎಪ್ರಿಲ್, ಮೇ ನಲ್ಲಿ ಲೋಕಸಭಾ ಚುನಾವಣೆ ಬರಬಹುದು. ಬಿಎಸ್‍ಪಿ- ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಸಹ ಬಿಜೆಪಿ ಜೊತೆ ಲೋಕಸಭೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಚಿವರು ಮುಂದಿನ ಲೋಕಾಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಬಿಎಸ್‍ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಈ ತೀರ್ಮಾನ ಕೈಗೊಂಡಿರಬಹುದು ಎಂದು ಅಭಿಪ್ರಾಯ ಪಟ್ಟರು.
ಆಪರೇಶನ್ ಕಮಲ ಯಾವುದು ಇಲ್ಲ. ಬಿಜೆಪಿಯ ಸ್ಥಳೀಯ ಶಾಸಕರು ನನ್ನ ಜೊತೆ ಇದ್ದಾರೆ. ಆಪರೇಶನ್ ಕಮಲದ ಬಗ್ಗೆ ಯಾರು ಮಾತನಾಡಿಲ್ಲ ಎಂದು ಜಿಟಿಡಿ ತಿಳಿಸಿದರು.
ಫೋಟೋ ಹಾಕಿಲ್ಲ ಎಂದು ಸಚಿವ ಪುಟ್ಟರಂಗ ಶೆಟ್ಟಿಗೆ ಬೇಸರ: ಸಚಿವ ಪುಟ್ಟರಂಗಶೆಟ್ಟಿಗೆ ಫೋಟೋ ಹಾಕಿಲ್ಲ ಎಂದು ಬೇಸರವಷ್ಟೇ. ಫೋಟೋ ಹಾಕಿಲ್ಲವೆಂದು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದು ಎಷ್ಟು ಸರಿ ಎಂದು ಸಚಿವ ಜಿ.ಟಿ.ದೇವೇಗೌಡ ಪ್ರಶ್ನಿಸಿದರು.
ಪುಟ್ಟರಂಗಶೆಟ್ಟಿಯವರ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರಾ ಮಹೇಶ್ ಫೋಟೋ ಏಕೆ ಹಾಕಿದ್ದೀರಿ ಎನ್ನುವ ಪ್ರಶ್ನೆಯನ್ನು ಅವರು ಮಾಡುತ್ತಿದ್ದಾರೆ. ಅವರು ದಸರಾ ಕಾರ್ಯಕ್ರಮದಲ್ಲಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಅದಕ್ಕೆ ಅವರ ಫೋಟೋ ಹಾಕಿದ್ದೇವೆ. ಅದನ್ನೇ ಅವರು ತಪ್ಪಾಗಿ ಅರ್ಥೈಸಿಕೊಂಡರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದರು.
ಹೀಗಾಗಿ ದಸರಾದಲ್ಲಿ ರಾಜಕೀಯ ಮಾಡದೇ, ಎಲ್ಲರೂ ಬಂದು ದಸರಾ ಯಶಸ್ವಿಗೊಳಿಸಿ ಎಂದು ಕಾಂಗ್ರೆಸ್ ಶಾಸಕರಿಗೆ, ಸಚಿವರಿಗೆ ಹಾಗೂ ಸಂಸದರಿಗೆ ಮನವಿ ಮಾಡಿಕೊಂಡರು. ಈ ಹಿಂದೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕನಾಗಿದ್ದಾಗ ಕಾಂಗ್ರೆಸ್ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದೇನೆ. ನೀವು ಹಾಗೇ ನಮ್ಮ ಜೊತೆ ದಸರಾದಲ್ಲಿ ಪಾಲ್ಗೊಳ್ಳಿ ಎನ್ನುವ ಮೂಲಕ ಮತ್ತೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ಕೊಟ್ಟರು.