ಆಣಿಗಳು ಮತ್ತು ಜಡ್ಡುಗಳಿಂದ ಪಾರಾಗುವುದು ಹೇಗೆ?
ಚರ್ಮದ ಮೇಲಿನ ದೀರ್ಘಕಾಲೀನ ಹೆಚ್ಚುವರಿ ಒತ್ತಡ ಮತ್ತು ಘರ್ಷಣೆಯಿಂದಾಗಿ ಚರ್ಮದ ಪದರಗಳು ಗಟ್ಟಿಯಾದಾಗ ಆಣಿ ಮತ್ತು ಜಡ್ಡುಗಳುಂಟಾಗುತ್ತವೆ. ಇವು ಹೆಚ್ಚಾಗಿ ಪಾದ ಮತ್ತು ಅದರ ಬೆರಳುಗಳು, ಕೈಗಳು ಮತ್ತು ಬೆರಳುಗಳಲ್ಲಿ ಕಂಡು ಬರುತ್ತವೆ ಮತ್ತು ನೋವನ್ನುಂಟು ಮಾಡುತ್ತವೆ. ನೀವು ಕ್ರೀಡಾಳು, ಮಧುಮೇಹಿಯಾಗಿದ್ದಲ್ಲಿ ಅಥವಾ ನಿಮಗೆ ವಯಸ್ಸಾಗಿದ್ದರೆ ಆಣಿಗಳು ಮತ್ತು ಜಡ್ಡುಗಳುಂಟಾಗುವ ಅಪಾಯ ಹೆಚ್ಚು.
ಆಣಿಗಳು ಮತ್ತು ಜಡ್ಡುಗಳಿಂದ ಉಂಟಾಗುವ ನೋವನ್ನು ಶಮನಿಸಲು ಹಲವಾರು ಚಿಕಿತ್ಸಾ ವಿಧಾನಗಳಿವೆ. ಇವು ಯಾವುದೂ ಫಲ ನೀಡದಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಮನೆಯಲ್ಲಿ ಇವುಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಸೂಚಿಸುವ ಕೆಲವು ವಿಧಾನಗಳಿಲ್ಲಿವೆ....
►ಉಜ್ಜುಗಲ್ಲಿನ ಬಳಕೆ
ಪುಮೈಸ್ ಸ್ಟೋನ್ ಎಂದು ಕರೆಯಲಾಗುವ ಉಜ್ಜುಗಲ್ಲು ಅಥವಾ ಬೂದಿಗಲ್ಲನ್ನು ಬಳಸಿ ಆಣಿಗಳು ಮತ್ತು ಜಡ್ಡುಗಳಿಂದ ಮುಕ್ತಿ ಪಡೆಯಬಹುದು. ಈಗ ಆನ್ಲೈನ್ ಸ್ಟೋರ್ಗಳಲ್ಲಿಯೂ ಈ ಒರಟಾದ ಕಲ್ಲುಗಳು ದೊರೆಯುತ್ತವೆ. 5-10 ನಿಮಿಷಗಳ ಕಾಲ ನಿಮ್ಮ ಪಾದವನ್ನು ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ. ಚರ್ಮ ಮೃದುವಾದ ಬಳಿಕ ಉಜ್ಜುಗಲ್ಲಿನಿಂದ ಆಣಿ ಮತ್ತು ಜಡ್ಡುಗಳನ್ನು ತಿಕ್ಕಿರಿ. ಉಜ್ಜುಗಲ್ಲನ್ನು ಬಳಸುವ ಮುನ್ನ ಅದನ್ನು ಬಿಸಿನೀರಿನಲ್ಲಿ ಮುಳುಗಿಸಿ. ಸತ್ತ ಚರ್ಮವನ್ನು ತೆಗೆಯಲು ಕಲ್ಲನ್ನು ಪೀಡಿತ ಭಾಗದಲ್ಲಿ ಅತ್ತಿಂದಿತ್ತ ಅಥವಾ ಚಕ್ರಾಕಾರದಲ್ಲಿ ಮೃದುವಾಗಿ ಉಜ್ಜಿರಿ. ಅತಿಯಾದ ಪ್ರಮಾಣದಲ್ಲಿ ಚರ್ಮವನ್ನು ತೆಗೆಯಲು ಪ್ರಯತ್ನಿಸಬೇಡಿ. ಹಾಗೆ ಮಾಡುವುದರಿಂದ ರಕ್ತಸ್ರಾವವುಂಟಾಗಬಹುದು ಮತ್ತು ಆ ಭಾಗದಲ್ಲಿ ಸೋಂಕು ಉಂಟಾಗಬಹುದು.
ಮಧುಮೇಹಿಗಳು ಉಜ್ಜುಗಲ್ಲನ್ನು ಬಳಸುವಾಗ ಪಾದಗಳಿಗೆ ಗಾಯಗಳಾಗದಂತೆ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಹಸಿಯಾದ ಚರ್ಮದ ಮೇಲೆಯೇ ಉಜ್ಜುಗಲ್ಲನ್ನು ಬಳಸಬೇಕು ಮತ್ತು ಬಳಿಕ ಆ ಭಾಗದ ಚರ್ಮವನ್ನು ಮೃದುವಾಗಿರಿಸಲು ಲೋಷನ್ ಲೇಪಿಸಬೇಕು.
►ಸರಿಯಾದ ಶೂಗಳನ್ನೇ ಧರಿಸಿ
ಸೂಕ್ತವಲ್ಲದ ಶೂಗಳನ್ನು ಧರಿಸುವುದು ಆಣಿಗಳು ಮತ್ತು ಜಡ್ಡುಗಳುಂಟಾಗಲು ಅತ್ಯಂತ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ಇಂತಹ ಶೂಗಳು ಬೆರಳುಗಳ ಮೇಲೆ ಒತ್ತಡವನ್ನುಂಟು ಮಾಡುವ ಮೂಲಕ ಅಪಾಯವನ್ನು ಹೆಚ್ಚಿಸುತ್ತವೆ. ಕಾಲ್ಬೆರಳುಗಳ ಚಲನವಲನಕ್ಕೆ ಸ್ಥಳಾವಕಾಶವಿರುವ ಮತ್ತು ಪಾದಕ್ಕೆ ಸರಿಯಾಗಿ ಹೊಂದಿಕೆಯಾಗುವ ಶೂ ಅಥವಾ ಪಾದರಕ್ಷೆಗಳನ್ನೇ ಖರೀದಿಸಿ. ದಿನವಿಡೀ ಓಡಾಟದ ಬಳಿಕ ಸಂಜೆಯ ವೇಳೆಗೆ ಪಾದಗಳು ಸ್ವಲ್ಪ ಊದಿಕೊಳ್ಳುವುದರಿಂದ ಸರಿಯಾದ ಗಾತ್ರದ ಶೂಗಳನ್ನು ಖರೀದಿಸಲು ಅದು ಸೂಕ್ತ ಸಮಯವಾಗಿದೆ.
►ಕಾರ್ನ್ ಪ್ಲಾಸ್ಟರ್, ಪ್ಯಾಡಿಂಗ್ ಇತ್ಯಾದಿಗಳನ್ನು ಬಳಸಿ
ಆಣಿಗಳು ಮತ್ತು ಜಡ್ಡುಗಳಿಂದ ಮುಕ್ತಿ ಪಡೆಯಲು ನೆರವಾಗುವ ಹಲವಾರು ಚಿಕಿತ್ಸಾ ಸಾಧನಗಳು ಔಷಧಿ ಅಂಗಡಿಗಳಲ್ಲಿ ದೊರೆಯುತ್ತವೆ. ಕಾರ್ನ್ ಪ್ಲಾಸ್ಟರ್, ಪ್ಯಾಡ್ಗಳು ಮತ್ತು ಸಪೋರ್ಟ್ಗಳು ಇವುಗಳಲ್ಲಿ ಸೇರಿವೆ. ಪ್ಲಾಸ್ಟರ್ಗಳನ್ನು ಆಣಿಯ ಮೇಲೆ ಅಂಟಿಸುವುದರಿಂದ ಚರ್ಮ ಮತ್ತು ಶೂ ನಡುವಿನ ನೇರ ಸಂಪರ್ಕವನ್ನು ತಡೆಯುತ್ತದೆ. ಜಡ್ಡುಗಳ ಮೇಲೆ ಈ ಪ್ಲಾಸ್ಟರ್ಗಳನ್ನು ಅಂಟಿಸಿದಾಗ ಅದು ಚರ್ಮದ ಇನ್ನಷ್ಟು ಕೆರಳುವಿಕೆಯನ್ನು ತಡೆಯುತ್ತದೆ. ನಿಮ್ಮ ಪಾದಕ್ಕೆ ಆಧಾರವಾಗಿ ಬಟ್ಟೆಯ ಪಟ್ಟಿಗಳನ್ನು ಮತ್ತು ಕವರ್ಗಳನ್ನು ಸಹ ಬಳಸಬಹುದಾಗಿದೆ. ಆದರೆ ಮಧುಮೇಹ,ಸೂಕ್ಷ್ಮ ಚರ್ಮ ಅಥವಾ ರಕ್ತ ಸಂಚಾರ ಸಮಸ್ಯೆ ಹೊಂದಿರುವವರಿಗೆ ಇವು ತೊಂದರೆಯನ್ನುಂಟು ಮಾಡಬಹುದು,ಹೀಗಾಗಿ ಇವುಗಳ ಬಳಕೆಯ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳಯದು.
►ಕಾರ್ನ್ ಕ್ಯಾಪ್ ಬಳಸಿ
ಕಾರ್ನ ಕ್ಯಾಪ್ ನೋಟದಲ್ಲಿ ಬ್ಯಾಂಡೇಜ್ನಂತಿರುತ್ತದೆ. ಇದರ ಕೇಂದ್ರಭಾಗದಲ್ಲಿ ಔಷಧಿಯಿರುತ್ತದೆ. ಈ ಕ್ಯಾಪ್ನ್ನು ಆಣಿಯ ಸುತ್ತ ಸುತ್ತಿ ಒಂದು ವಾರ ಹಾಗೆಯೇ ಬಿಟ್ಟು ನಂತರ ತೆಗೆಯಬೇಕು. ಇದು ಆಣಿಗಳು ಮತ್ತು ಜಡ್ಡುಗಳನ್ನು ಸುಲಭವಾಗಿ ತೆಗೆಯಲು ನೆರವಾಗುತ್ತದೆ. ಆದರೆ ಮಧುಮೇಹಿಗಳಲ್ಲಿ ಈ ಕ್ಯಾಪ್ನಲ್ಲಿಯ ರಾಸಾಯನಿಕಗಳು ಚರ್ಮವನ್ನು ಸುಡಬಹುದು ಮತ್ತು ಸೋಂಕುಗಳು ಮತ್ತು ಹುಣ್ಣುಗಳ ಅಪಾಯವನ್ನು ಹೆಚ್ಚಿಸುವುದರಿಂದ ಅಂತಹವರು ಈ ಕ್ಯಾಪ್ಗಳನ್ನು ಬಳಸುವ ಗೋಜಿಗೆ ಹೋಗಬಾರದು.
►ಪ್ರತಿದಿನ ಮಾಯಿಶ್ಚರೈಸರ್ ಹಚ್ಚಿರಿ
ಆಣಿಗಳು ಮತ್ತು ಜಡ್ಡುಗಳು ಗಟ್ಟಿ ಚರ್ಮಗಳಾಗಿರುವುದರಿಂದ ಪ್ರತಿದಿನ ಮಾಯಿಶ್ಚರೈಸರ್ ಹಚ್ಚುವುದರಿಂದ ಚರ್ಮವು ಮೃದುಗೊಳ್ಳುತ್ತದೆ. ಇದು ಆಣಿಗಳು ಮತ್ತು ಜಡ್ಡುಗಳು ಪದೇಪದೇ ಉಂಟಾಗುವುದನ್ನು ತಡೆಯುತ್ತದೆ.
►ಕಾಲ್ಬೆರಳುಗಳ ಉಗುರುಗಳನ್ನು ಕತ್ತರಿಸುತ್ತಿರಿ.
ಕಾಲ್ಬೆರಳುಗಳ ಉಗುರುಗಳು ಉದ್ದವಾಗಿದ್ದರೆ ಶೂದಲ್ಲಿ ತುರುಕಲ್ಪಟ್ಟಾಗ ಅವು ಸುತ್ತಲಿನ ಭಾಗದ ಮೇಲೆ ಒತ್ತಡವನ್ನುಂಟು ಮಾಡುತ್ತವೆ ಮತ್ತು ಇದು ದೀರ್ಘಾವಧಿಯಲ್ಲಿ ಆಣಿಗಳು ಮತ್ತು ಜಡ್ಡುಗಳ ಅಪಾಯವನ್ನುಂಟು ಮಾಡಬಹುದು. ಹೀಗಾಗಿ ಉಗುರುಗಳನ್ನು ಆಗಾಗ್ಗೆ ಕತ್ತರಿಸುತ್ತಿರಿ.
►ಯಾವುದನ್ನು ಮಾಡಬಾರದು?
ಕೆಲವರು ಆಣಿಗಳು ಮತ್ತು ಜಡ್ಡುಗಳಿಂದ ಪಾರಾಗಲು ಅಲೋವೆರಾ ಮತ್ತು ಬೇಕಿಂಗ್ ಸೋಡಾದಂತಹ ಮನೆಮದ್ದುಗಳ ಮೊರೆ ಹೋಗುತ್ತಾರೆ. ಆದರೆ ಇವು ಪರಿಣಾಮಕಾರಿ ಎನ್ನುವುದನ್ನು ಯಾವುದೇ ಸಂಶೋಧನೆಯು ಸಾಬೀತುಗೊಳಿಸಿಲ್ಲ. ಇವುಗಳನ್ನು ಬಳಸುವುದು ಚರ್ಮವು ಇನ್ನಷ್ಟು ಕೆರಳುವಂತೆ ಮಾಡಬಹುದು ಮತ್ತು ಚರ್ಮ ಸೋಂಕುಗಳ ಅಪಾಯವನ್ನು ಹೆಚ್ಚಿಸಬಹುದು. ಬಣ್ಣ ಗಳನ್ನು ಬಳಸಬೇಡಿ. ಇವುಗಳಲ್ಲಿಯ ರಾಸಾಯನಿಕಗಳು ಪಾದಗಳ ಹುಣ್ಣುಗಳು ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಮಧುಮೇಹಿಗಳು ಅಥವಾ ರಕ್ತಚಲನೆಯ ಸಮಸ್ಯೆ ಇರುವರು ಇವುಗಳನ್ನು ಬಳಸಿದರೆ ಪಾದವನ್ನೇ ಕತ್ತರಿಸಬೇಕಾಗಬಹುದು.
ನೀವಾಗಿಯೇ ಆಣಿಗಳು ಮತ್ತು ಜಡ್ಡುಗಳನ್ನು ಕತ್ತರಿಸುವ ಸಾಹಸಕ್ಕೆ ಹೋಗಬೇಡಿ. ಇದು ಅಪಾಯಕಾರಿಯಾಗಬಹುದು. ರಕ್ತಸ್ರಾವಕ್ಕೆ ಮತ್ತು ಸೋಂಕು ಹೆಚ್ಚಲು ಕಾರಣವಾಗಬಹುದು. ಹೀಗಾಗಿ ವೈದ್ಯರನ್ನು ಭೇಟಿಯಾಗುವುದು ಜಾಣತನವಾಗುತ್ತದೆ.