ನ್ಯಾ.ಸದಾಶಿವ ಆಯೋಗ ವರದಿ: ಶಿಫಾರಸ್ಸಿಗೆ ಸ್ಪಂದಿಸಿದ ಮುಖ್ಯಮಂತ್ರಿಗೆ ಅಭಿನಂದನೆ
ಬೆಂಗಳೂರು, ಅ. 13: ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಸಂಬಂಧದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಶಿಫಾರಸ್ಸು ಮಾಡುವ ಭರವಸೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮಾದಿಗ ಸಂಘಟನೆಗಳ ಮಹಾಸಭಾ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಮಹಾಸಭಾ ಅಧ್ಯಕ್ಷ ಅಂಬಣ್ಣ ಅರೋಲಿಕರ್ ತಿಳಿಸಿದ್ದಾರೆ.
ಶನಿವಾರ ನಗರದ ಪ್ರಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಅಂಬಣ್ಣ ಅರೋಲಿಕರ್, ಅ.2ರಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಮಾದಿಗರ ಮಹಾಯುದ್ಧದ ಅನಿರ್ದಿಷ್ಟಾವಧಿ ಮುಷ್ಕರವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ, ಸಮುದಾಯದ ಹಿರಿಯ ರಾಜಕಾರಣಿಗಳೂ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆಯವರಿಗೂ ಅಭಿನಂದನೆಗಳು ಎಂದರು.
ರಾಜ್ಯ ಸರಕಾರ ಹಾಗೂ ಪಕ್ಷಾತೀತವಾಗಿ ನಮ್ಮ ಹೋರಾಟವನ್ನು ಬೆಂಬಲಿಸಿ ಮುಷ್ಕರದಲ್ಲಿ ಭಾಗವಹಿಸಿದ ಎಲ್ಲ ಸಂಘ-ಸಂಸ್ಥೆಗಳಿಗೆ ಹಾಗೂ ಹೋರಾಟನಿರತರಿಗೆ ಊಟ-ನೀರು ಕೊಟ್ಟು, ಬೆಂಬಲ ನೀಡಿದ ಬಹುಸಂಖ್ಯಾತ ಸಮುದಾಯದ ಋಣ ತೀರಿಸುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ್ಲ ಎಂದು ಹೇಳಿದರು.
ಮಹಾಸಭಾ ಮುಖಂಡರಾದ ಮುತ್ತಣ್ಣ, ಪ್ರಸನ್ನ ಚಕ್ರವರ್ತಿ, ನಾಗರಾಜ್ ಎಂ. ಕೊಡಿಗೇಹಳ್ಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.





