ಲೈಂಗಿಕ ದೌರ್ಜನ್ಯ ಆರೋಪ: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ರಾಜಿನಾಮೆಗೆ ಒತ್ತಾಯ
ಬೆಂಗಳೂರು, ಅ.13: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಈ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ನಗರದ ಕಾರ್ಪೊರೇಷನ್ ವೃತ್ತದಲ್ಲಿ ಪ್ರದರ್ಶನ ನಡೆಸಿತು.
ಕೇಂದ್ರ ಸರಕಾರದ ಸಚಿವರೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಆದರೆ, ಈ ಬಗ್ಗೆ ಕೇಂದ್ರ ಸರಕಾರ ಮೌನ ವಹಿಸಿರುವುದು ಮಹಿಳಾ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸಚಿವ ಎಂ.ಜೆ.ಅಕ್ಬರ್‌ರಿಂದ ರಾಜೀನಾಮೆ ಪಡೆದು, ಸೂಕ್ತ ತನಿಖೆ ನಡೆಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಜನವಾದಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಮಾತನಾಡಿ, ಮಹಿಳಾ ಸಂಘಟನೆಗಳ ನಿರಂತರವಾದ ಹೋರಾಟದ ಫಲವಾಗಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವಂತಹ ಕಾನೂನು ಜಾರಿಯಾಯಿತು. ಆದರೆ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಕಾನೂನುಗಳಿಗೆ ಯಾವುದೆ ಮಾನ್ಯತೆ ಇಲ್ಲವೆಂಬುದು ಇತ್ತೀಚಿಗೆ ಬಹಿರಂಗಗೊಳ್ಳುತ್ತಿರುವ ‘ಮಿಟೂ’ ಅಭಿಯಾನವೆ ಸಾಕ್ಷಿಯೆಂದು ತಿಳಿಸಿದರು.
ಮಿಟೂ ಅಭಿಯಾನದ ಮೂಲಕ ಮಹಿಳೆಯರು ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಬಹಿರಂಗ ಪಡೆಸುತ್ತಿದ್ದಾರೆ. ಇವರ ಹೇಳಿಕೆಗಳನ್ನು ಸಾಕ್ಷಿಯಾಗಿಸಿಕೊಂಡು ಕೇಂದ್ರ ಸರಕಾರ ಲೈಂಗಿಕ ದೌರ್ಜನ್ಯಗಳ ತಡೆಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ಜನವಾದಿ ಸಂಘಟನೆಯ ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ, ಸಂಚಾಲಕಿ ಶ್ರೀಮತಿ ಹಾಗೂ ಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.







