ಮೂಡಿಗೆರೆ: ವೃದ್ಧನಿಂದ ಬಾಲಕಿಯ ಅತ್ಯಾಚಾರಕ್ಕೆ ಯತ್ನ; ಆರೋಪ

ಚಿಕ್ಕಮಗಳೂರು, ಅ.14: ವೃದ್ಧನೋರ್ವ ಆರು ವರ್ಷದ ಬಾಲಕಿಯೋರ್ವಳನ್ನು ಅತ್ಯಾಚಾರಗೈಯ್ಯಲು ಯತ್ನಿಸಿದ ಘಟನೆ ಶನಿವಾರ ಸಂಜೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಬಳಿಕ ನಾಪತ್ತೆಯಾಗಿರುವ ವೃದ್ಧನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆಂದು ತಿಳಿದುಬಂದಿದೆ.
ಪಾಪಣ್ಣ(70) ಎಂಬಾತ ರವಿವಾರ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ ನೆರೆ ಮನೆಯ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಕೃತ್ಯ ಎಸಗಲು ಪ್ರಯತ್ನಿಸಿದ್ದಾನೆಂದು ಬಾಲಕಿ ಪೋಷಕರು ದೂರಿದ್ದಾರೆ.
ಘಟನೆ ವೇಳೆ ಕಿರುಚಾಡಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಪೋಷಕರು ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿ ತಪಾಸಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಮೂಡಿಗೆರೆ ಪಟ್ಟಣ ಠಾಣೆಯ ಪೊಲೀಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದ್ದು, ದೂರು ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ. ಆರೋಪಿಯ ಬಂಧನಕ್ಕೆ ಪೊಲೀಸರು ಶನಿವಾರ ರಾತ್ರಿ ಇಡೀ ಪ್ರಯತ್ನಿಸಿದರೂ ಆತನ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.





