'ಕಾಫಿಡೇ ಮಲ್ನಾಡ್ ಅಲ್ಟ್ರಾ'ಗೆ ವರ್ಣರಂಜಿತ ತೆರೆ
110 ಕಿ.ಮೀ. ಓಟದಲ್ಲಿ ಫ್ಲೊರೆಂಟ್ ಬೊಗ್ವಿನ್‍ಗೆ ಪ್ರಶಸ್ತಿ

ಚಿಕ್ಕಮಗಳೂರು, ಅ.14: ವಿಶ್ವದ ಖ್ಯಾತ ಮ್ಯಾರಥಾನ್ ಓಟಗಾರ ಫ್ಲೊರೆಂಟ್ ಬೊಗ್ವಿನ್, ಕಾಫಿಡೇ ಅಲ್ಟ್ರಾ 3ನೇ ಆವೃತ್ತಿಯ 110 ಕಿಲೋಮೀಟರ್ ವಿಭಾಗದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದರೆ, ಹೇಡನ್ ಹಾಕ್ಸ್ ಹಾಗೂ ಟಿಮ್ ಹೆವಿಟ್ ಕ್ರಮವಾಗಿ 50 ಮತ್ತು 80 ಕಿ.ಮೀ. ವರ್ಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಕಾಫೀ ಡೇ ಮಲ್ನಾಡ್ ಅಲ್ಟ್ರಾದ 3ನೇ ಆವೃತ್ತಿಯು ರವಿವಾರ ಲಾಲ್‍ಬಾಗ್ ಎಸ್ಟೇಟ್‍ನಲ್ಲಿ ಭರ್ಜರಿಯಾಗಿ ಕೊನೆಗೊಂಡಿತು. ಬೊಗ್ವನ್ 13 ಗಂಟೆ 50 ನಿಮಿಷಗಳಲ್ಲಿ ಗುರಿ ತಲುಪಿದರೆ, ಹಾಕ್ಸ್ 4 ಗಂಟೆ 19 ನಿಮಿಷ 38 ಸೆಕೆಂಡ್‍ನಲ್ಲಿ ಹಾಗೂ ಹೆವಿಟ್ 7 ಗಂಟೆ 59 ನಿಮಿಷ 8 ಸೆಕೆಂಟ್‍ನಲ್ಲಿ ಗುರಿಮುಟ್ಟಿದರು. 50 ಹಾಗೂ 80 ಕಿಲೋಮೀಟರ್ ಸ್ಪರ್ಧೆಯಲ್ಲಿ ನೂತನ ಕೂಟದಾಖಲೆ ನಿರ್ಮಾಣವಾಯಿತು.
110 ಕಿಲೋಮೀಟರ್ ಸ್ಪರ್ಧೆಯಲ್ಲಿ ಕೊಜಿ ಬೆಪ್ಪು (14.18.10) ಮತ್ತು ಪ್ರಣಯ ಮೊಹಾಂತಿ (14.34.49) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು. 80 ಕಿಲೋಮೀಟರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಜೊ ಮೀಕ್ (8:15:14) ಹಾಗೂ ಮೂರನೇ ಸ್ಥಾನ ಕೆ.ಸಂತೋಷ್ (8:49:18) ಪಾಲಾಯಿತು.
ಕಾಫೀ ಡೇ ಮಲ್ನಾಡ್ ಅಲ್ಟ್ರಾ 2018 ಮೊಟ್ಟಮೊದಲ ಬಾರಿಗೆ 800ಕ್ಕಿಂತ ಹೆಚ್ಚಿನ ಭಾಗವಹಿಸುವ ಜನರಿಂದಾಗಿ ಒಂದು ಮೈಲಿಗಲ್ಲು ಸಾಧಿಸಿದೆ. ಮೂರನೇ ಆವೃತ್ತಿಯ ಮತ್ತೊಂದು ವಿಶೇಷತೆ ಎಂದರೆ ಕಾರ್ಯಕ್ರಮದ ಸಾಂಸ್ಕೃತಿಕ ವೈವಿಧ್ಯತೆಯಾಗಿದ್ದು, ವಿವಿಧ ವಯೋಮಾನ, ಲಿಂಗ, ಹಾಗೂ ರಾಷ್ಟ್ರೀಯತೆಗಳನ್ನು ಒಗ್ಗೂಡಿಸಿತು. ಬ್ರಿಟನ್, ಪೋಲೆಂಡ್, ಫ್ರಾನ್ಸ್, ಯು.ಎಸ್.ಎ., ಮಾಲ್ಡೀವ್ಸ್, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಬೆಲ್ಜಿಯಮ್, ಸಿಂಗಾಪುರ, ಕೊಲಂಬಿಯಾ, ಜಪಾನ್ ಹಾಗು ಮಲೇಶಿಯಾ ದೇಶಗಳಿಂದ ಸುಮಾರು 43 ಅಂತಾರಾಷ್ಟ್ರೀಯ ಓಟಗಾರರು ಭಾಗವಹಿಸಿದ್ದು, ಅತ್ಯಧಿಕ ಸಂಖ್ಯೆಯ ಓಟಗಾರರು ಅಂದರೆ 7 ಮಂದಿ ಓಟಗಾರರು ಅಮೆರಿಕ ಪ್ರತಿನಿಧಿಸಿದ್ದರು. ಜೋ ಮೀಕ್ ಹಾಗೂ ಕೊರ್ರಿನ್ ಮಾಲ್ಕೋಮ್‍ನಂಥ ವೃತ್ತಿಪರ ಓಟಗಾರರೂ ಸೇರಿ 143 ಮಹಿಳಾ ಓಟಗಾರರು ಭಾಗವಹಿಸಿದ್ದರು.
ಭಾರತದಾದ್ಯಂತದ 22 ರಾಜ್ಯಗಳ ಭಾಗವಹಿಸುವಿಕೆಯೊಂದಿಗೆ ಭಾರತದಿಂದ ನೋಂದಣಿಯಾದ ಓಟಗಾರರ ಸಂಖ್ಯೆಯೂ ಈ ಸಲ ಹೆಚ್ಚಾಗಿತ್ತು. 75 ವರ್ಷಗಳವರೆಗಿನ ವಿವಿಧ ವಯೋವರ್ಗಗಳಾದ್ಯಂತ ಓಟಗಾರರು ಭಾಗವಹಿಸಿದ್ದರು.
ಭಾರತದ 22 ರಾಜ್ಯಗಳಿಂದ ಓಟಗಾರರು 3ನೇ ಆವೃತ್ತಿಗೆ ನೋಂದಾಯಿಸಿದ್ದು, ಇವರುಗಳ ಪೈಕಿ ಕರ್ನಾಟಕ ಅತ್ಯಧಿಕ ಸಂಖ್ಯೆಯನ್ನು ಅಂದರೆ 385 ಭಾಗೀದಾರರನ್ನು, ತಮಿಳುನಾಡು 315, ಮಹಾರಾಷ್ಟ್ರ 89 ಓಟಗಾರರನ್ನು ಕಳುಹಿಸುತ್ತಿದೆ. ಕೇರಳ, ಒಡಿಶಾ, ತಮಿಳುನಾಡು, ಮಧ್ಯಪ್ರದೇಶ, ಉತ್ತರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗೋವಾ, ಅಸ್ಸಾಂ, ಗುಜರಾತ್, ಹರಿಯಾಣ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಪುದುಚ್ಚೇರಿ, ಉತ್ತರಖಾಂಡ, ಪಂಜಾಬ್, ರಾಜಸ್ತಾನ, ಸಿಕ್ಕಿಂ ರಾಜ್ಯಗಳ ಓಟಗಾರರೂ ಕೂಡ ಈ ಸಹಿಷ್ಣುತಾ ಓಟದಲ್ಲಿ ಪಾಲ್ಗೊಂಡಿದ್ದರು.
ಕಾಫೀ ಡೇ ಮಲ್ನಾಡ್ ಅಲ್ಟ್ರಾದ ಮೂರನೇ ಆವೃತ್ತಿಯ ಯಶಸ್ಸಿನ ಬಗ್ಗೆ ನಾವು ಅತ್ಯಂತ ಹರ್ಷಗೊಂಡಿದ್ದೇವೆ. ಈ ಬಾರಿ ಭಾಗವಹಿಸುವಿಕೆಯು ಹಿಂದೆಂದಿಗಿಂತಲೂ ಅತ್ಯಧಿಕವಾಗಿದ್ದು ಓಟಗಾರರು ಈ ಅಲ್ಟ್ರಾ ಮ್ಯಾರಥಾನ್ ಅನುಭವವನ್ನು ಪ್ರೇರಣಾತ್ಮಕವಾಗಿಯೂ ಸವಾಲನ್ನಾಗಿಯೂ ಸ್ವೀಕರಿಸಿದರು. ಯುವಕರಲ್ಲಿ ಮಲೆನಾಡಿನ ನೈಸರ್ಗಿಕ ಜೀವವೈವಿಧ್ಯತೆಯನ್ನು ಪರಿಚಯಿಸುವುದು ಕಾಫೀ ಡೇ ಕನಸಾಗಿದ್ದರಿಂದ, ಇಂತಹ ಪರಿಸರ ಸ್ನೇಹಿ ಅಲ್ಟ್ರಾ ಮ್ಯಾರಥಾನ್‍ಅನ್ನು ಕಾಫೀ ತೋಟಗಳ ಹೃದ್ಭಾಗಗಳ ನಡುವೆಯೇ ನಡೆಸಿದ್ದು ಅದನ್ನು ನನಸಾಗಿಸಲು ನೆರವಾಯಿತು. ಆರಂಬದಿಂದಲೂ ಕಾಫೀ ತೋಟಗಳನ್ನು ಸಂರಕ್ಷಿಸುತ್ತಾ ಬಂದಿರುವ ಕಾಫೀ ಡೇ ಬ್ರ್ಯಾಂಡ್ ತೋಟಗಳ ನಡುವೆ ಓಡುವುದೆಂದರೆ ಹೆಮ್ಮೆಯ ಸಂಗತಿ. ಮುಂದಿನ ವರ್ಷ ಕಾಫೀ ಡೇ ಮಲ್ನಾಡ್ ಅಲ್ಟ್ರಾದ ನಾಲ್ಕನೆ ಆವೃತ್ತಿಯು ಇನ್ನೂ ದೊಡ್ಡದಾಗಿರುತ್ತದೆ.
- ಡಾ.ಪ್ರದೀಪ್ ಕೆಂಜಿಗೆ, ಕೆಫೆ ಕಾಫೀ ಡೇ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ
ವರ್ಷದಿಂದ ವರ್ಷಕ್ಕೆ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಓಟವು ಪ್ರಸಿದ್ಧವಾಗುತ್ತಲೇ ಬರುತ್ತಿರುವುದಕ್ಕೆ ಅದರಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆಯೇ ಸಾಕ್ಷಿಯಾಗಿದೆ. ಕಳೆದ ವರ್ಷ, 441 ಓಟಗಾರರು ಇದ್ದರು ಮತ್ತು ಈ ವರ್ಷ ಸುಮಾರು ಮೂರುಪಟ್ಟು ಹೆಚ್ಚಾಗಿದೆ. ಮಲ್ನಾಡ್ ಅಲ್ಟ್ರಾಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಾವು ಅತ್ಯಂತ ಹರ್ಷಗೊಂಡಿದ್ದೇವೆ ಮತ್ತು ಮುಂಬರುವ ವರ್ಷಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ ಎಂದು ನಿರೀಕ್ಷಿಸುತ್ತೇವೆ.
- ಶ್ಯಾಂ ಸುಂದರ್ ಪಾಣಿ, ಕಾಫೀ ಡೇ ಮಲ್ನಾಡ್ ಅಲ್ಟ್ರಾದ ಸ್ಥಾಪಕ ಹಾಗೂ ಕಾರ್ಯಕ್ರಮ ನಿರ್ದೇಶಕ







