'ದಸರಾದಲ್ಲಿ ಭಾಗವಹಿಸದಿದ್ದರೆ ಸಮಾಜಕ್ಕೆ ತಪ್ಪು ಅಭಿಪ್ರಾಯ ರವಾನೆಯಾಗುತ್ತದೆ'
ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಮೈಸೂರು,ಅ.14: ಇದು ನಾಡಹಬ್ಬ ದಸರಾ ಮಹೋತ್ಸವ, ಯಾವುದೋ ಒಂದು ಪಕ್ಷದ ಕಾರ್ಯಕ್ರಮವಲ್ಲ, ದಯವಿಟ್ಟು ಸಣ್ಣಪುಟ್ಟ ತಾರತಮ್ಯವನ್ನು ಬದಿಗಿಟ್ಟು ಎಲ್ಲರೂ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.
ಸಾಂಸ್ಕೃತಿಕ ಮೆರವಣಿಗೆ ಉದ್ಘಾಟನೆಗೆ ರವಿವಾರ ಮೈಸೂರಿಗೆ ಆಗಮಿಸಿದ ಅವರು, ಸರ್ಕಾರಿ ಅತಿಥಿಗೃಹದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ದಸರಾ ಮಹೋತ್ಸವ ಪ್ರಾರಂಭವಾದ ದಿನದಿಂದ ಇಲ್ಲಿವರೆಗೂ ಕಾಂಗ್ರೆಸ್ ಪಕ್ಷದ ಯಾವೊಬ್ಬ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಪಕ್ಷದ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ನಡೆದುಕೊಳ್ಳುತಿದ್ದಾರೆ. ಹಾಗಿದ್ದ ಮೇಲೆ ನಾವು ಏಕೆ ಅವರಿಗೆ ಬೆಂಬಲ ನೀಡಬೇಕು ಎಂದು ಪ್ರಶ್ನಿಸಿದರು.
ನಮ್ಮನ್ನು ಕಡೆಗಣಿಸಿದ ಮೇಲೆ ಕಾರ್ಯಕರ್ತರ ಮನಸ್ಸಿಗೆ ಉಂಟಾದ ನೋವನ್ನು ನಮ್ಮ ಜಿಲ್ಲೆಯ ಶಾಸಕರುಗಳ ಗಮನಕ್ಕೆ ತಂದು ದಸರಾದಲ್ಲಿ ಪಾಲ್ಗೊಳ್ಲದಂತೆ ಮನವಿ ಮಾಡಿದ್ದೇವೆ ಹಾಗಾಗಿ ಅವರ್ಯಾರು ಭಾಗವಹಿಸದೆ ಬಹಿಷ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ನೋವನ್ನು ವ್ಯಕ್ತಪಡಿಸಿದರು.
ಎಲ್ಲರ ಸಮಸ್ಯೆ ಆಲಿಸಿದ ನಂತರ ಮಾತನಾಡಿದ ಪರಮೇಶ್ವರ್, ನಿಮ್ಮ ಭಾವನೆ ಅರ್ಥವಾಗುತ್ತದೆ. ಆದರೂ ಕೆಲವೊಮ್ಮೆ ಅದನ್ನೆಲ್ಲ ನುಂಗಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮಂತ್ರಿಯಾಗಿರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದೆ. ಇಲ್ಲದಿದ್ದರೆ ಸಮಾಜಕ್ಕೆ ತಪ್ಪು ಅಭಿಪ್ರಾಯ ಹೋಗುತ್ತದೆ. ಎಲ್ಲವು ಸರಿಯಾಗುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಇದು ಸಮ್ಮಿಶ್ರ ಸರ್ಕಾರ, ನಾವು ಯಾವ ಕಾರಣದಿಂದ ಮೈತ್ರಿ ಮಾಡಿಕೊಂಡೆವು ಎಂಬುದು ನಿಮಗೆ ಗೊತ್ತಿದೆ. ನಿಮ್ಮನ್ನು ಕಡೆಗಣಿಸಲಾಗಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ.ಯಾಕೆ ಹೀಗಾಯಿತು ಎಂಬುದರ ಕುರಿತು ಮಾತನಾಡುತ್ತೇನೆ. ಇದು ಯಾವುದೋ ಒಂದು ಪಕ್ಷದ ಕಾರ್ಯಕ್ರಮವಲ್ಲ, ಇದು ನಾಡಹಬ್ಬ ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಕೆಲವು ಸಣ್ಣಪುಟ್ಟ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಹೇಳಿದರು.
ಸಭೆಯಲ್ಲಿ ಸಂಸದ ಆರ್.ಧ್ರುವನಾರಾಯಣ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ಸದಸ್ಯರಾದ ಎನ್.ಭಾಸ್ಕರ್, ಅಕ್ಬರ್ ಅಲೀಂ, ಕಾಂಗ್ರೆಸ್ ಮುಖಂಡರಾದ ಶೌಕತ್ ಅಲಿಖಾನ್, ಸುನೀಲ್, ಪ್ರಶಾಂತ್ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.







