ಗುಜರಾತ್ ಸಿಎಂ ವಿರುದ್ಧ ಸಾವಿರಾರು ಕರಿ ಬಲೂನು ಹಾರಟ

ಲಕ್ನೊ, ಅ.15: ಗುಜರಾತ್‌ನಲ್ಲಿ ಉತ್ತರ ಭಾರತೀಯರ ವಿರುದ್ಧ ಹಲ್ಲೆ ನಡೆದಿರುವುದನ್ನು ವಿರೋಧಿಸಿ ಉತ್ತರಪ್ರದೇಶ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯ ದ್ವಿತೀಯ ದಿನ ಸಾವಿರಾರು ಕರಿ ಬಲೂನುಗಳನ್ನು ಹಾರಿಸಿ ಪ್ರತಿಭಟನೆ ನಡೆಸಲಾಯಿತು.
ಉತ್ತರಪ್ರದೇಶಕ್ಕೆ ಭೇಟಿ ನೀಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಝ್ರತ್‌ಗಂಜ್ ಪ್ರದೇಶದಲ್ಲಿರುವ ಅತಿಥಿಗೃಹದಿಂದ ಹೊರಬಂದ ವೇಳೆ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕರಿ ಬಲೂನುಗಳನ್ನು ಹಾರಿಬಿಟ್ಟರು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಕಾಂಗ್ರೆಸ್ ಮುಖಂಡರೂ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಜೈಲಿಗೆ ಕರೆದೊಯ್ದರು. ಜೈಲಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಪ್ರತಿಭಟನೆ ಮುಂದುವರಿಸಿದರು ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಮುಖ್ಯಮಂತ್ರಿ ಉತ್ತರಪ್ರದೇಶದಿಂದ ನಿರ್ಗಮಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಉ.ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಮಿಶ್ರ ತಿಳಿಸಿದ್ದಾರೆ. ಅಕ್ಟೋಬರ್ 31ರಂದು ಗುಜರಾತ್‌ನಲ್ಲಿ ನಡೆಯಲಿರುವ ವಲ್ಲಭಬಾಯಿ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ಆಮಂತ್ರಿಸಲು ರೂಪಾನಿ ರವಿವಾರ ಲಕ್ನೋಗೆ ಆಗಮಿಸಿದ್ದಾರೆ.





