ಕನ್ನಡಿಗರನ್ನು ಅವಮಾನಿಸಿದ ನವಜೋತ್ ಸಿಂಗ್ ಸಿಧು: ಯಡಿಯೂರಪ್ಪ

ಬೆಂಗಳೂರು, ಅ.15: ದಕ್ಷಿಣ ಭಾರತಕ್ಕಿಂತ ತನಗೆ ಪಾಕಿಸ್ತಾನದಲ್ಲೆ ಹೆಚ್ಚು ನೆಮ್ಮದಿ ಎನ್ನುವ ಅರ್ಥದಲ್ಲಿ ಮಾತನಾಡುವ ಮೂಲಕ ಪಂಜಾಬ್ ರಾಜ್ಯ ಸರಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ದಕ್ಷಿಣ ಭಾರತೀಯರ ವಿರುದ್ಧ, ಪಾಕಿಸ್ತಾನದ ಪರವಾಗಿ ಸಿಧು ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತದೆಯೇ ಅಥವಾ ಖಂಡಿಸುತ್ತದೆಯೇ ಎಂಬುದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಹಾಗೂ ರಾಜ್ಯದ ಕಾಂಗ್ರೆಸ್ ಮುಖಂಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿಧು ನೀಡಿರುವ ಹೇಳಿಕೆಯು ದಕ್ಷಿಣ ರಾಜ್ಯಗಳ ಎಲ್ಲ ಭಾಷಿಕರಿಗೂ ಅವಮಾನ ಮಾಡಿದಂತಾಗಿದೆ. ಇದಕ್ಕಾಗಿ ಸಿಧು ದಕ್ಷಿಣ ಭಾರತೀಯರ ಕ್ಷಮೆಯಾಚಿಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಕ್ರಿಕೆಟ್ ಕ್ಷೇತ್ರದಲ್ಲಿ ಸಿಧು ಸಕ್ರಿಯವಾಗಿದ್ದಾಗ ಅನೇಕ ಬಾರಿ ದಕ್ಷಿಣದ ರಾಜ್ಯಗಳ ಕ್ರಿಕೆಟ್ ಪ್ರೇಮಿಗಳು ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ, ಉತ್ತೇಜನ ನೀಡಿದ್ದಾರೆ. ಅಲ್ಲದೇ, ಕರ್ನಾಟಕದಲ್ಲಿ ಅವರು ಕ್ರಿಕೆಟ್ ಆಟ ಆಡಲು ಬಂದಾಗ ಕನ್ನಡಿಗರು ಅವರಿಗೆ ಅಪಾರವಾದ ಪ್ರೀತಿ ತೋರಿದ್ದಾರೆ. ಅದೆಲ್ಲವನ್ನೂ ಮರೆತಿರುವ ಸಿಧು ಪಾಕಿಸ್ತಾನದ ಬಗ್ಗೆ ಹೆಚ್ಚು ಪ್ರೀತಿ ತೋರಿರುವುದು ದುರ್ದೈವ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರಿಗೆ ಭಾರತಕ್ಕಿಂತ ಪಾಕಿಸ್ತಾನ ಪ್ರಿಯವಾಗಿದ್ದರೆ ಅವರು ಅಲ್ಲೆ ಹೋಗಿ ನೆಲೆಸಲಿ. ಅದಲ್ಲದೇ, ಭಾರತದಲ್ಲೆ ಇದ್ದು ಭಾರತೀಯರಿಗೆ, ಕನ್ನಡಿಗರಿಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ. ಕಾಂಗ್ರೆಸ್ ಸೇರಿದ ಕೂಡಲೇ ಸಿಧು ಆ ಪಕ್ಷದಲ್ಲಿರುವ ದಾಸ್ಯದ ಮನೋಭಾವವನ್ನು ರೂಢಿಸಿಕೊಂಡು ಕ್ರೀಡಾ ಮನೋಭಾವವನ್ನೆ ಮರೆತಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ಹೇಗೆ ಪರಿಗಣಿಸುತ್ತಿದ್ದಾರೆ? ಸಿಧು ಹೇಳಿಕೆಗೆ ಕಾಂಗ್ರೆಸ್ ನಾಯಕರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.







