ಮಂಗಳೂರು: ಶಕ್ತಿ ಶಾಲೆಯಲ್ಲಿ ಬೇಸಿಗೆ ಶಿಬಿರ

ಮಂಗಳೂರು, ಅ.15: ನಗರದ ಶಕ್ತಿ ವಸತಿ ಶಾಲೆಯಲ್ಲಿ ಅ.9ರಿಂದ 14ರವರೆಗೆ ವೈವಿಧ್ಯಮಯ ಚಟುವಟಿಕೆಗಳಿಂದ ಕೂಡಿದ ದಸರಾ ರಜಾಕಾಲದ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಬೇರೆ ಬೇರೆ ಶಾಲೆಗಳ 71 ಮಂದಿ ವಿದ್ಯಾರ್ಥಿಗಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮಲ್ಲಿ ಅಂತರ್ಗತವಾಗಿದ್ದ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾದರು.
ಈ ಶಿಬಿರದಲ್ಲಿ ನಾಡಿನ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಮಾರ್ಗದರ್ಶನ ನೀಡಿದರು. ಗಾಳಿಪಟವನ್ನು ರಚಿಸಿ ವಿದ್ಯಾರ್ಥಿಗಳು ಆಕಾಶದಲ್ಲಿ ಹಾರಿಸಿದರು. ವ್ಯಂಗ್ಯ ಚಿತ್ರ, ಚಿತ್ರಕಲೆ, ನೃತ್ಯ-ಕುಣಿತಗಳು, ಫೋಮ್ ಆರ್ಟ್, ವರ್ಲಿ ಆರ್ಟ್, ಕಾವಿ ಕಲೆ, ಆವೆ ಮಣ್ಣಿನ ರಚನೆ, ಕಾಗದ ಕಲೆ, ಹಾಡು ಹೀಗೆ ಹತ್ತಾರು ವಿಷಯಗಳಲ್ಲಿ ವಿದ್ಯಾರ್ಥಿಗಳು ನೇಪುಣ್ಯತೆ ಸಾಧಿಸಿ ಸಂಭ್ರಮಪಟ್ಟರು.
ದಿನೇಶ್ ಹೊಳ್ಳ, ಜಾನ್ ಚಂದ್ರನ್, ಪಿ.ಎನ್. ಆಚಾರ್ಯ ಮಣಿಪಾಲ, ಸಚಿತಾ ನಂದಗೋಪಾಲ್, ನಾದಶ್ರೀ, ಸುಧೀರ್ ಕಾವೂರು, ಪೆರ್ಮುದೆ ಮೋಹನ್ ಕುಮಾರ್, ವೀಣಾ ಶ್ರೀನಿವಾಸ್, ವೆಂಕಿ ಫಲಿಮಾರು, ಪೂರ್ಣೇಶ್, ರತ್ನಾವತಿ ಜೆ. ಬೈಕಾಡಿ, ಕಮಲಾಕರ ಶೇಟ್, ಏಶ್ಲೆ, ಪೂರ್ಣಿಮಾ ಶೆಟ್ಟಿ, ಅಶ್ವಿತಾ, ಶರತ್ ಶೆಟ್ಟಿ, ಶರ್ಮಿಳಾ ಆಳ್ವ ಮೊದಲಾದವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಮಾರೋಪದಂದು ಎಲ್ಲ ವಿದ್ಯಾರ್ಥಿಗಳು ತಾವು ತಯಾರಿಸಿದ ವಸ್ತುಗಳನ್ನು ಪ್ರದರ್ಶಕ್ಕಿಟ್ಟು ಪೋಷಕರ, ಸಂದರ್ಶಕರ ಹಾಗೂ ಅತಿಥಿಗಳ ಮನಗೆದ್ದರು. ಸಂಸದ ನಳಿನ್‌ಕುಮಾರ್ ಕಟೀಲು ಶಿಬಿರಾರ್ಥಿಗಳ ಕಾರ್ಯಕ್ರಮ ವೀಕ್ಷಿಸಿ ಪ್ರಶಂಸೆಗೈದರು.
ಇಂತಹ ಸೃಜನಶೀಲ ಚಟುವಟಿಕೆಗಳಿಂದ ಕೂಡಿದ ಶಿಬಿರಗಳು ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ತಂದು ಶಿಕ್ಷಣಕ್ಕೆ ಪೂರಕವಾಗುವುದಲ್ಲದೆ, ಮಕ್ಕಳ ವ್ಯಕ್ತಿತ್ವವನ್ನು ಪೂರ್ಣ ರೂಪಿಸಲು ಸಹಕಾರಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ಶಾಲಾಡಳಿತ ಮಂಡಳಿ, ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಶಕ್ತಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಪ್ರಧಾನ ಸಲಹೆಗಾರ ರಮೇಶ ಕೆ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮಾಬಾನು ಶಿಬಿರಾರ್ಥಿಗಳಿಗೆ ಪೂರಕವಾಗಿ ಸಹಕರಿಸಿದ್ದರು.







