ಸಂಗಬೆಟ್ಟು ಉಪಚುನಾವಣೆ: ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಬಂಟ್ವಾಳ, ಅ. 15: ಅ. 28ರಂದು ನಡೆಯಲಿರುವ ಸಂಗಬೆಟ್ಟು ಉಪಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದಿನೇಶ್ ಸುಂದರ್ ಶಾಂತಿ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರಭಾಕರ ಪ್ರಭು ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಬಿ.ಸಿ.ರೋಡ್ ಸಾಮಾಥ್ರ್ಯ ಸೌಧದ ಕಚೇರಿಗೆ ತೆರಳಿ ಚುನಾವಣಾಧಿಕಾರಿ ನಾರಾಯಣ ಶೆಟ್ಟಿ ಹಾಗೂ ಸಹಾಯಕ ಚುನಾವಣಾಧಿಕಾರಿ ಲಕ್ಷಣ್ ಅವರಲ್ಲಿ ಕಾಂಗ್ರೆಸ್‍ನಿಂದ ಕುಕ್ಕಿಪಾಡಿ ಗ್ರಾಪಂ ಅಧ್ಯಕ್ಷರಾಗಿರುವ ದಿನೇಶ್ ಸುಂದರ್ ಶಾಂತಿ ಅವರು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಈ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬೇಬಿ ಕುಂದರ್, ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ: ಬಿಜೆಪಿಯಿಂದ ಪ್ರಭಾಕರ ಪ್ರಭು ಅವರು ಇಂದು ಮಧ್ಯಾಹ್ನ ಬಿಜೆಪಿ ಪಕ್ಷದ ಪ್ರಮುಖರ ಜೊತೆಗೆ ಬಿ.ಸಿ.ರೋಡ್ ಸಾಮಾಥ್ರ್ಯ ಸೌಧದ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಮಹಿಳಾ ಮೋರ್ಚಾದ ವಕ್ತಾರೆ ಸುಲೋಚನ ಜಿ.ಕೆ ಭಟ್ ಮಾತನಾಡಿ, ಜನಸಾಮಾನ್ಯರ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವ ಜನನಾಯಕ ಪ್ರಭಾಕರ ಪ್ರಭು ಅವರು, ಬಂಟ್ವಾಳ ಕಾಂಗ್ರೆಸ್ ಮುಕ್ತವಾಗಿ ಮಾಡಲು ಈ ಬಾರಿ ಸಂಗಬೆಟ್ಟು ತಾಪಂ ಕ್ಷೇತ್ರದ ಗೆಲುವು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಸತೀಶ್ ಪೂಜಾರಿ, ಜಿ.ಆನಂದ, ಮೋನಪ್ಪ ದೇವಸ್ಯ, ರತ್ನಾಕರ ಚೌಟ, ರಾಮ್ ದಾಸ ಬಂಟ್ವಾಳ, ಆನಂದ ಶಂಭೂರು, ರಂಜಿತ್ ಮೈರ, ಪ್ರಮೋದ್ ಅಜ್ಜಿ ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ತಾಪಂ ಸದಸ್ಯನಾಗಿದ್ದ ಪ್ರಭಾಕರ ಪ್ರಭು ಅವರು, ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ ತೆರವಾಗಿದ್ದ ಸಂಗಬೆಟ್ಟು ತಾಪಂ ಕ್ಷೇತ್ರಕ್ಕೆ ಅ. 28ರಂದು ಉಪಚುನಾವಣೆ ನಡೆಯಲಿದೆ.







