ಡಾ.ಮನು ಬಳಿಗಾರ್‌ಗೆ ಹೆಚ್ಚುವರಿ ಅಧಿಕಾರ ಬೇಡ: ಕನ್ನಡ ಸಂಘರ್ಷ ಸಮಿತಿ ಒತ್ತಾಯ
ಬೆಂಗಳೂರು, ಅ.15: ಕಾನೂನು ಬಾಹಿರವಾಗಿ, ವಾಮಮಾರ್ಗದ ಮೂಲಕ ಎರಡು ವರ್ಷ ಹೆಚ್ಚುವರಿಯಾಗಿ ಅಧಿಕಾರ ಅನುಭವಿಸುವ ಪ್ರಯತ್ನವನ್ನು ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಕೈಬಿಡಬೇಕೆಂದು ಕನ್ನಡ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಸೋಮವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಸಮಾನ ಮನಸ್ಕರ ಚಿಂತನ ಸಭೆಯಲ್ಲಿ ಸಾಹಿತಿಗಳು, ಲೇಖಕರು, ಪರಿಷತ್ತಿನ ಸದಸ್ಯರು, ಡಾ.ಮನುಬಳಿಗಾರ್‌ಗೆ ಅಧಿಕಾರ ದಾಹ ಹೆಚ್ಚಾಗಿದ್ದು, ಕುತಂತ್ರದ ರಾಜಕೀಯದ ಮೂಲಕ ಸಾಂಸ್ಕೃತಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳಂಕ ತರುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಡಾ.ಮನು ಬಳಿಗಾರ್‌ರನ್ನು ಬಹುತೇಕ ಸಾಹಿತಿಗಳು ಬೆಂಬಲಿಸಿದ್ದರು. ಆದರೆ, ಈಗ ಅವರಿಗೆ ಅಧಿಕಾರದ ಆಸೆ ಹೆಚ್ಚಾಗಿದೆ. ಅವರನ್ನು ಪ್ರಶ್ನಿಸುವ ಎಲ್ಲರನ್ನೂ ದಲಿತ, ಮಹಿಳಾ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರಕ್ಕಾಗಿರುವ ಸ್ಥಳವಲ್ಲ, ಸೇವೆಗಾಗಿರುವ ಜಾಗ. ಆದರೆ, ಮನುಬಳಿಗಾರ್ ಅದನ್ನು ಅಧಿಕಾರ ಚಲಾಯಿಸುವ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಈ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅಲ್ಲದೆ, ಪರಿಷತ್ತಿನ ಸದಸ್ಯರ ನಡುವೆಯೇ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಡೆದು ಆಳುವ ನೀತಿ ಮನು ಬಳಿಗಾರ್‌ಗೆ ಶೋಭೆ ತರುವುದಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಹಲವು ಸಾಹಿತಿಗಳು ಅಭಿಪ್ರಾಯಿಸಿದರು.
ಉಡುಪಿ ಜಿಲ್ಲೆಯ ಕೋಟಾದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಹೆಚ್ಚಳ ಮಾಡಿಕೊಂಡಿರುವ ಶಿಫಾರಸ್ಸನ್ನು ಸರಕಾರ ತಿರಸ್ಕರಿಸಬೇಕು.
-ಡಾ.ವಿಜಯಾ, ಸಾಹಿತಿ







