ಸೂರತ್‌ನಲ್ಲಿ ಬಿಹಾರಿ ಯುವಕನ ಸಾವು: ಸಿಬಿಐ ತನಿಖೆಗೆ ಮಾಂಝಿ ಆಗ್ರಹ

ಪಾಟ್ನಾ,ಅ.15: ಸೂರತ್‌ನಲ್ಲಿ ಗಯಾ ಜಿಲ್ಲೆಯ ನಿವಾಸಿ ಅಮರಜಿತ್ ಸಿಂಗ್ (32) ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ ರಾಮ್ ಮಾಂಝಿ ಅವರು ಸೋಮವಾರ ಇಲ್ಲಿ ಆಗ್ರಹಿಸಿದರು.
ಕಳೆದ 15 ವರ್ಷಗಳಿಂದಲೂ ಸೂರತ್‌ನಲ್ಲಿ ಕಾರ್ಮಿಕ ಗುತ್ತಿಗೆದಾರನಾಗಿ ದುಡಿಯುತ್ತಿದ್ದ ಸಿಂಗ್ ಶುಕ್ರವಾರ ಮಧ್ಯರಾತ್ರಿ ಮೃತಪಟ್ಟಿದ್ದು,ಆತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಪ್ರತಿಪಾದಿಸುತ್ತಿದ್ದಾರೆ. ಆದರೆ ಗುಂಪೊಂದು ಆತನನ್ನು ಥಳಿಸಿ ಹತ್ಯೆ ಮಾಡಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಸಬರಕಾಂತಾ ಜಿಲ್ಲೆಯಲ್ಲಿ ಇತ್ತೀಚಿಗೆ 14 ತಿಂಗಳು ಪ್ರಾಯದ ಹೆಣ್ಣುಮಗುವಿನ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಿಹಾರಿ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಬಳಿಕ ಗುಜರಾತ್‌ನ ಕೆಲವು ಜಿಲ್ಲೆಗಳಲ್ಲಿ ಹಿಂದಿ ಭಾಷಿಕ ವಲಸಿಗರ ಮೇಲೆ ದಾಳಿಗಳು ನಡೆದಿದ್ದವು.
ರಾಜ್ಯದಲ್ಲಿಯೇ ಅತಿ ಹೆಚ್ಚು ವಲಸಿಗ ಕಾರ್ಮಿಕರು ಸೂರತ್‌ನಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.
ತಾನು ಶೀಘ್ರವೇ ಮೃತನ ಕುಟುಂಬವನ್ನು ಭೇಟಿಯಾಗುವುದಾಗಿ ತಿಳಿಸಿದ ಗಯಾ ಜಿಲ್ಲೆಯವರೇ ಆಗಿರುವ ಹಾಲಿ ಶಾಸಕ ಮಾಂಝಿ,ಸಿಂಗ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಮತ್ತು ಮೃತನ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸಿಂಗ್ ಸಾವು ಬೈಕ್ ಅಪಘಾತದಿಂದ ಸಂಭವಿಸಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ರವಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ತಿಳಿಸಿದ್ದ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ ಮೋದಿ ಅವರು,ಹಿಂದಿ ಭಾಷಿಕರ ಮೇಲೆ ಹಲ್ಲೆಗಳಿಗೆ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರಲ್ಲದೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವುದಕ್ಕೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು.







