ಉಡುಪಿ: ಎಚ್1ಎನ್1 ನಿಯಂತ್ರಣದಲ್ಲಿ - ಡಾ.ವಾಸುದೇವ
ಉಡುಪಿ, ಅ.16: ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿರುವ ಎಚ್1ಎನ್1 ಹಾವಳಿ ಉಡುಪಿ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದೆ. ಕಳೆದ ಜನವರಿ ತಿಂಗಳಿಂದ ಈವರೆಗೆ ಜಿಲ್ಲೆಯಲ್ಲಿ ಕೇವಲ 21 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ತಿಳಿಸಿದ್ದಾರೆ.
ಕಳೆದ ವರ್ಷ (2017)ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 540 ಎಚ್1ಎನ್1 ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಈ ವರ್ಷ ಜನವರಿಯಿಂದ ಅಕ್ಟೋಬರ್ ಮೊದಲ ವಾರದವರೆಗೆ ಕೇವಲ 21 ಪ್ರಕರಣಗಳು ಮಾತ್ರ ತ್ತೆಯಾಗಿವೆ ಎಂದವರು ವಿವರಿಸಿದ್ದಾರೆ.
ಈ ವರ್ಷದ ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದು ಕಳೆದೆರಡು ತಿಂಗಳುಗಳಿಂದ. ಆದರೆ ಜಿಲ್ಲೆಯಲ್ಲಿ ಈವರೆಗೆ ರೋಗದಿಂದ ಯಾವುದೇ ಸಾವು ಸಂಭವಿಸಿಲ್ಲ. ಅಲ್ಲದೇ ಎಚ್1ಎನ್1 ಜ್ವರ ಈ ಬಾರಿ ಹೆಚ್ಚಾಗಿ ಕಾಣಿಸಿ ಕೊಂಡಿರುವುದು ಮಣಿಪಾಲ ಆಸುಪಾಸಿನಲ್ಲೇ. ಅದೂ ಮಣಿಪಾಲದ ವಿದ್ಯಾರ್ಥಿಗಳು ಹಾಗೂ ಇಲ್ಲಿನ ಹಾಸ್ಟೆಲ್‌ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರೂ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದರು.
ಜಿಲ್ಲೆಯಲ್ಲಿ ಎಚ್1ಎನ್1 ರೋಗದ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ. ಎಚ್1ಎನ್1 ಚಿಕಿತ್ಸೆಗಾಗಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಿಯನ್ನು ದಾಸ್ತಾನಿರಿಸಲಾಗಿದೆ ಎಂದು ಡಾ.ವಾಸುದೇವ್ ತಿಳಿಸಿದರು.







